

ಬೆಳಗಾವಿ: ಲಿಂಗಾಯತರು ಒಳಪಂಗಡಗಳನ್ನು ಮರೆತು ಶಿಕ್ಷಣ ಮತ್ತು ಸಂಸ್ಕೃತಿಗೆ ಮಹತ್ವ ಕೊಟ್ಟು ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಆವರಣದಲ್ಲಿರುವ ಡಾ.ಬಿ.ಎಸ್. ಜೀರಗೆ ಸಭಾಂಗಣದಲ್ಲಿ ಕೆಎಲ್‌ಇ ಸಂಸ್ಥೆ, ಅಖಿಲ ಭಾರತ ವೀರಶೈವ ಮಹಾಸಭೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ವೀರಶೈವ ವಧು-ವರ ಅನ್ವೇಷಣ ಕೇಂದ್ರದ 60ನೇ ವಧು-ವರ ಪಾಲಕರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯದ ವಧು-ವರ ಕಲ್ಯಾಣವು ಸುಲಭವಾಗಿ, ಸಕಾಲದಲ್ಲಿ ಜರುಗಿ ದಾಂಪತ್ಯ ಜೀವನಸುಖಮಯವಾಗಲಿ ಎನ್ನುವ ಸದುದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ. ಪಾಲಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅತಿಥಿಯಾಗಿ ಆಗಮಿಸಿದ್ದ ಮಹಾಸಭೆ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಮಹಾಸಭೆಯ ಜಿಲ್ಲಾ ಘಟಕವು ಲಿಂಗಾಯತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಬಡ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರಿಗಾಗಿ ನಗರದ ಸುಭಾಸ ನಗರದಲ್ಲಿ ಉಚಿತ ವಸತಿ ನಿಲಯ ಪ್ರಾರಂಭಿಸಲಾಗುತ್ತಿದೆ. ಸಮಾಜ ಬಂಧುಗಳು ಈ ಕೈಂಕರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ವಧು-ವರ ಅನ್ವೇಷಣ ಕೇಂದ್ರದ ಅಧ್ಯಕ್ಷ ಡಾ.ಎ್.ವಿ. ಮಾನ್ವಿ ಮಾತನಾಡಿ, ಸಮುದಾಯದ ಪ್ರಯೋಜನಕ್ಕಾಗಿ 1988ರಿಂದ ಇಂತಹ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ. ಡಾ.ಕೋರೆ ಅವರು ಸುಸಜ್ಜಿತ ಸಭಾಂಗಣವನ್ನು ಸಮುದಾಯದವರ ಒಳಿತಿಗಾಗಿ ಉಚಿತವಾಗಿ ನೀಡಿ ಸಹಕರಿಸಿದ್ದಾರೆ ಎಂದರು. ಕಾರ್ಯದರ್ಶಿ ಡಾ.ಗುರುದೇವಿ ಹುಲೆಪ್ಪನವರಮಠ, ಪ್ರಕಾಶ ಬಾಳೇಕುಂದ್ರಿ ಇತರರಿದ್ದರು. ಆಶಾ ಯಮಕನಮರಡಿ ನಿರೂಪಿಸಿದರು. ಜ್ಯೋತಿ ಬಾದಾಮಿ ವಂದಿಸಿದರು.