ರಂಗೋಲಿಯಿಂದ ಕ್ರೀಡಾ ಮನೋಭಾವ

Published on

ಬಳ್ಳಾರಿ : ರಂಗೋಲಿ ಸ್ಪರ್ಧೆ ಎಂದರೆ ಕೇವಲ ರಂಗೋಲಿ ಬಿಡಿಸುವುದಲ್ಲ. ಇದರಿಂದ ಕ್ರೀಡಾ ಮನೋಭಾವ ಬೆಳೆಯುತ್ತದೆ ಎಂದು ಶಾಸಕ ‌ನಾರಾ ಭರತರೆಡ್ಡಿ ಹೇಳಿದರು.

ಇಲ್ಲಿನ ಮುನ್ಸಿಪಲ್ ಕಾಲೇಜು ‌ಮೈದಾನದಲ್ಲಿ ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್, ರಾಯಲ್ ರೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಾಲಿಕೆಯ ಮೂರನೇ ವಾರ್ಡ್ ಸದಸ್ಯ ಎಂ.ಪ್ರಭಂಜನ್ ಕುಮಾರ್ ನೇತೃತ್ವದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ `ಸಂಚಾರ ಸಂಕ್ರಾಂತಿ ರಂಗೋಲಿ ಸಂಪ್ರೀತಿ' ಎಂಬ ಘೋಷವಾಕ್ಯದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಗೆ ಭೋಗಿ ವಸ್ತುಗಳಿಗೆ ಪೂಜೆ ಸಲ್ಲಿಸಿ, ಬೆಂಕಿ ಸ್ಪರ್ಶಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪ್ರತಿದಿನ ಮನೆಯಲ್ಲೇ ಇರುವ ಮಹಿಳೆಯರಿಗೆ ಇಂತಹ ರಂಗೋಲಿ ಸ್ಪರ್ಧೆಗಳಂತಹ ಕ್ರೀಡೆಗಳು ಒಂದಷ್ಟು ಮನರಂಜನೆ ನೀಡುತ್ತವೆ. ನಾವೇ ಆಯೋಜಿಸಬೇಕು ಎಂದುಕೊಂಡಿದ್ದೆವು. ಆದರೆ, ಪಾಲಿಕೆ ಸದಸ್ಯ ಪ್ರಭಂಜನ್ ಆಯೋಜಿಸಿದ್ದಾರೆ. ಅವರು ಈ ಹಿಂದೆಯೂ ಅವರ ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದಾರೆ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಎಂ. ಪ್ರಭಂಜನಕುಮಾರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಇವುಗಳ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಹೆಲ್ಮೆಟ್ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಸಲುವಾಗಿ ಸಂಕ್ರಾಂತಿ ಹಬ್ಬದ ನಿಮಿತ್ತ ರಂಗೋಲಿ ಸ್ಪರ್ಧೆ ಮೂಲಕ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಹಿಳೆಯರಿಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಅವರಿಗೊಂದು ಹೆಲ್ಮೆಟ್‌ನ್ನು ನೀಡಿ, ಅವರ ಕುಟುಂಬದವರಿಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ ಎಂದರು.

ಸ್ಪರ್ಧೆ'ಯಲ್ಲಿ 120 ಕ್ಕೂ ಹೆಚ್ಚು ಮಹಿಳೆಯರು, ಯುವತಿಯರು ಭಾಗವಹಿಸಿ ವಿವಿಧ ರೀತಿಯ ರಂಗೋಲಿಗಳನ್ನು ಬಿಡಿಸುವ ಮೂಲಕ ಗಮನ ಸೆಳೆದರು. ಚಿತ್ತ ಚಿತ್ತಾರದಲ್ಲಿ ಅರಳಿದ್ದ ರಂಗೋಲಿಗಳಿಗೆ ವಿವಿಧ ಬಣ್ಣಗಳನ್ನು ತುಂಬುವ ಮೂಲಕ ನೆರೆದವರನ್ನು, ನಿರ್ಣಾಯಕರನ್ನು ಆಕರ್ಷಿಸಿದವು. ಸ್ವಯಂ ಪ್ರೇರಣೆಯಿಂದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರು, ಯುವತಿಯರಿಗೆ ರಂಗೋಲಿ ಬಿಡಿಸುವಾಗ ಸಹೋದರಿ, ಸಹೋದರರು, ಸಂಬಂಧಿಕರು ನೆರವಾಗಿದ್ದು ಗಮನ ಸೆಳೆಯಿತು.

ಸಂಚಾರಿ ನಿಯಮ ಜಾಗೃತಿ ಮೂಡಿಸಿದ ರಂಗೋಲಿ :

`ಸಂಚಾರ ಸಂಕ್ರಾಂತಿ ರಂಗೋಲಿ ಸಂಪ್ರೀತಿ' ಎಂಬ ಘೋಷವಾಕ್ಯದಂತೆ ರಂಗೋಲಿ ಸ್ಪರ್ಧೆಯಲ್ಲಿ ಮಹಿಳಾ ಪೊಲೀಸ್ ಪೇದೆಗಳು, ಸಂಚಾರಿ ನಿಯಮಗಳ ಕುರಿತು ಅನಾವರಣಗೊಳಿಸಿದ್ದ ರಂಗೋಲಿ ಹೆಚ್ಚು ಗಮನ ಸೆಳೆಯಿತು. ಮಹಿಳಾ ಪೊಲೀಸರಾದ ಹೆಚ್.ಎಂ.ಸುಜಾತಾ ಸೇರಿ ಹಲವರು ಈ ರಂಗೋಲಿಯನ್ನು ಬಿಡಿಸಿದ್ದರು. ರಂಗೋಲಿಯಲ್ಲಿ ವಾಹನ, ಸಂಚಾರಿ ನಿಯಮಗಳ ಚಿಹ್ನೆಗಳನ್ನು ಬಿಡಿಸಿ, ಸೀಟ್ ಬೆಲ್ಟ್ ಹಾಕಿಕೊಂಡು ವಾಹನ ಚಲಾಯಿಸಿ, ಹೆಲ್ಮೆಟ್ ಧರಿಸಿ, ನೋ ಪಾರ್ಕಿಂಗ್, ಬಾಟಲ್‌ಗಳನ್ನು ಬಿಡಿಸಿ, ಮದ್ಯಸೇವಿಸಿ ವಾಹನ ಚಲಾಯಿಸಬೇಡಿ ಎಂದು ಬರೆಯುವ ಮೂಲಕ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಿದ್ದು ಗಮನ ಸೆಳೆಯಿತು. ಇವುಗಳೊಂದಿಗೆ ಮಹಿಳೆಯೊಬ್ಬರು ರಂಗೋಲಿಯಲ್ಲೇ ದೇವಿ ಮೂರ್ತಿಯನ್ನು ಬಿಡಿಸಿ, ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆಯ ಐದು ಗ್ಯಾರೆಂಟಿ ಯೋಜನೆಗಳನ ಹೆಸರುಗಳನ್ನು ಬರೆಯುವ ಮೂಲಕ ಗಮನ ಸಳೆದರು. ಇನ್ನುಳಿದ ತ್ರಿಡಿ ರಂಗೋಲಿ, ಚುಕ್ಕೆ ರಂಗೋಲಿ, ಸಂಕ್ರಾAತಿ ಹಬ್ಬದಲ್ಲಿ ಹೆಚ್ಚು ಕಂಡುಬಂರುವ ಸಾಂಪ್ರದಾಯಿ ಬಣ್ಣ ಬಣ್ಣದ ಸಾಂಪ್ರದಾಯಿಕ ರಂಗೋಲಿಗಳು ಹೆಚ್ಚು ಕಂಡುಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net