ವಿದ್ಯಾರ್ಥಿಗಳಲ್ಲಿರಲಿ ಕ್ರೀಡಾ ಮನೋಭಾವ

Sportsmanship among students
ವಿಜಯಪುರದ ವೇದ ಅಕಾಡೆಮಿಯಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಡಾ. ಶಿವಾನಂದ ಕೆಲೂರ, ಬಿ.ಆರ್. ಚೌಕಿಮಠ, ಪಿಎಸ್‌ಐ ಆರಿಫ್ ಮುಶಾಪುರಿ ಮತ್ತಿತರರಿದ್ದಾರೆ.
Published on

ವಿಜಯಪುರ: ಕ್ರೀಡಾ ಮನೋಭಾವ ಮತ್ತು ದೈಹಿಕ ಕಸರತ್ತು ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಕ್ರೀಡೆ ಮತ್ತು ಕಸರತ್ತನ್ನು ಮೈಗೂಡಿಸಿಕೊಂಡು ಆರೋಗ್ಯಕರ ಜೀವನವನ್ನು ನಡೆಸುವಂತಾಗಬೇಕೆಂದು ಶ್ರೀ ವೇದ ಅಕಾಡೆಮಿ ಅಧ್ಯಕ್ಷ ಡಾ. ಶಿವಾನಂದ ಕೆಲೂರ ಹೇಳಿದರು.

ನಗರ ಹೊರವಲಯದ ವೇದ ಅಕಾಡೆಮಿಯಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಜೀವನದಲ್ಲಿ ಅಪ್ರತಿಮ ಸಾಧನೆ ಮಾಡಬಯಸುವ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಮಾನಸಿಕ ಸ್ಥೈರ್ಯ ಬಲಗೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅವಶ್ಯಕ ಎಂದು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್. ಚೌಕಿಮಠ ಮಾತನಾಡಿ, ಪಾಲಕರು ಮಕ್ಕಳಿಗೆ ಆರೋಗ್ಯಕರ ಆಹಾರ ನೀಡುವಂತಾಗಬೇಕು. ಜಂಕ್ ಫುಡ್ ತಿನ್ನುವುದರಿಂದ ಸ್ಥೂಲಕಾಯ ಹೆಚ್ಚಾಗಿ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಪಾಲಕರು ಮಕ್ಕಳ ಆಹಾರ ಪದ್ಧತಿ ಮೇಲೆ ಗಮನ ಹರಿಸಬೇಕೆಂದು ತಿಳಿ ಹೇಳಿದರು.

ಉದ್ಘಾಟನೆ ನೆರವೇರಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆರಿಫ್ ಮುಶಾಪುರಿ ಮಾತನಾಡಿ, ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಮೊಬೈಲ್ ಬಳಕೆ ದುಷ್ಪರಿಣಾಮ ಬೀರುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದು, ಪಾಲಕರು ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವಂತಾಗಬೇಕು. ಮಕ್ಕಳೊಂದಿಗೆ ಅನ್ಯೋನ್ಯತೆಯಿಂದ ಇದ್ದಾಗ ಮಾತ್ರ ಮೊಬೈಲ್ ದೂರವಿಡಬಹುದು ಎಂದು ತಿಳಿಸಿದರು.

ವಿಜೇತ ತಂಡ ಯಜುರ್ವೇದಕ್ಕೆ ಚಾಂಪಿಯನ್ ಹೌಸ್ ಪ್ರಶಸ್ತಿ ನೀಡಲಾಯಿತು. ಸಂಸ್ಥೆ ಉಪಾಧ್ಯಕ್ಷ ದಯಾನಂದ ಕೆಲೂರ, ಖಜಾಂಚಿ ಶಿವಲೀಲಾ ಕೆಲೂರ, ಪ್ರಧಾನ ಕಾರ್ಯದರ್ಶಿ ಎನ್.ಜಿ. ಯರನಾಳ, ಪ್ರಾಂಶುಪಾಲ ಸುನೀಲ ಬಿ.ಎಂ., ಮುಖ್ಯ ಗುರುಮಾತೆ ರಶ್ಮಿ ಕವಟಗಿಮಠ ಉಪಸ್ಥಿತರಿದ್ದರು. ನಫೀಸಾ ಬಾಗೇವಾಡಿ ಸ್ವಾಗತಿಸಿದರು. ಮಧು ಕಲ್ಮಠ ನಿರೂಪಿಸಿದರು. ಸನಾ ಇನಾಂದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net