

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಹಾಗೂ ಶಾರೀರಿಕವಾಗಿ ಸದೃಢಗೊಳ್ಳಲು ಕ್ರೀಡೆ ಅವಶ್ಯ. ಆಟದಲ್ಲಿ ಚುರುಕಾಗಿದ್ದರೆ ನಾಯಕತ್ವ ಗುಣ ಬೆಳೆಯುವುದರ ಜತೆಗೆ ಬುದ್ದಿಮಟ್ಟ ಸಹ ಉತ್ತಮವಾಗಿರಲಿದೆ ಎಂದು ಶಹರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರ ಹೇಳಿದರು.
ನಗರದ ವನಿತಾ ಸೇವಾ ಸಮಾಜದ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಟ ಆಡುವುದರಿಂದ ಎದುರಾಳಿಯ ಮಾನಸಿಕ ಸ್ಥಿತಿ ಅರ್ಥಮಾಡಿಕೊಳ್ಳುತ್ತೇವೆ. ಉತ್ತಮ ನಾಯಕನಾಗಲು ಕ್ರೀಡೆಯಲ್ಲಿ ತೊಡಗಬೇಕು. ಆಟವು ಸ್ಪರ್ಧಾತ್ಮಕ ಹಾಗೂ ಕ್ರೀಡಾ ಸ್ಪೂರ್ತಿಯಿಂದ ಇರಬೇಕು. ಹೆಣ್ಣು ಮಕ್ಕಳಿಗೂ ಸಮಾನ ಅವಕಾಶ ಇರುವ ಈ ಸಂದರ್ಭದಲ್ಲಿ ಕ್ರೀಡೆಯಲ್ಲೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಶಾಲೆ ಮಕ್ಕಳು ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿ ಎಂದು ಹಾರೈಸಿದರು.
ಕ್ರೀಡಾಪಟುಗಳು ಆಕರ್ಷಕ ಪಥಸಂಚಲನ ನಡೆಸಿದರು. ವನಿತಾ ಸೇವಾ ಸಮಾಜದ ನಿರ್ದೇಶಕ ದಾನಪ್ಪಾ ಕಬ್ಬೇರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಉಪಾಧ್ಯಕ್ಷೆ ರಾಧಿಕಾ ಕುಲಕರ್ಣಿ, ಕಾರ್ಯದರ್ಶಿ ಮಧುರಾ ಹೆಗಡೆ, ನಿರ್ದೇಶಕರಾದ ರಾಜೇಶ್ವರಿ ಅಳಗವಾಡಿ, ದೈಹಿಕ ಶಿಕ್ಷಣ ಶಿಕ್ಷಕಿ ಶಿಲ್ಪಾ ಚವರಿ, ಶಿಕ್ಷಕರು, ಇತರರು ಇದ್ದರು.
ಐ.ಎಚ್. ಪೂಜಾರ ಸ್ವಾಗತಿಸಿದರು. ಮಂಜುನಾಥ ಹಿರೇಮಠ ನಿರೂಪಿಸಿದರು. ಪಾರ್ವತಿ ಬಡಕುಂದ್ರಿ ವಂದಿಸಿದರು.