

ಬನ್ನೂರು: ಕ್ರೀಡೆಯಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ನವಕೀಸ್ ವಿದ್ಯಾಸಂಸ್ಥೆಯಿಂದ ಆಯೋಜಿಸಿದ್ದ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿ, ಆಧುನಿಕತೆಗೆ ಮಾರುಹೋಗಿ ಹಿಂದಿನ ಎಷ್ಟೋ ಆಟಗಳು ದೂರವಾಗುತ್ತಿವೆ. ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತಿದೆ. ಪಾಲಕರು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಟ್ಟು, ಬಯಲಿನ ಆಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಎಚ್.ಕೆ.ಪಾಂಡು ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಹೊರ ತರುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಮಕ್ಕಳಿಗೆ ಆಸಕ್ತಿಯಿರುವ ಕ್ರೀಡೆ ಬಗ್ಗೆ ಮಾರ್ಗದರ್ಶನ ನೀಡಿ ಉತ್ತಮ ಸಾಧನೆಗೆ ನೆರವಾಗಬೇಕು ಎಂದರು.
ಶಾಲಾ ಮಕ್ಕಳು ಆಕರ್ಷಕ ಪಥಸಂಚಲನ ನಡೆಸಿದರು. ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನವಕೀಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಡಿ.ಎಸ್.ತಾರಕೇಶ್ವರಿ, ವ್ಯವಸ್ಥಾಪಕ ಮಹೇಶ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಜಿಲ್ಲಾ ಸಂಘದ ಸಂಘಟಕ ಡಾ.ರಾಮ್‌ಪ್ರಸಾದ್, ಎಚ್.ಆರ್.ವರ್ಧನ್‌ಮೂರ್ತಿ, ಕೆ. ಎಸ್.ಸಂತೋಷ್, ಡಾ.ಸೌಮ್ಯಾ, ಅನೂಪ್ ಇತರರು ಇದ್ದರು.