ಕ್ರೀಡಾ ಸಾಧಕರಿಗೆ ಸಿಕ್ಕಿದೆ ಉನ್ನತ ಹುದ್ದೆ

28spt2
Published on

ಮಡಿಕೇರಿ: ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವಿಕಸನಗೊಳ್ಳಲು ಸಾಧ್ಯ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.


ಸೋಮವಾರಪೇಟೆ ತಾಲೂಕಿನ ಕುಸುಬೂರು-ಕೆಂಚಮ್ಮನಬಾಣೆಯ ಭಾರತ್ ಮಾತಾ ಸೇವಾ ಸಂಘದ ವತಿಯಿಂದ ಕೆಂಚಮ್ಮನಬಾಣೆಯ ಭಾರತ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಸಂಘವು ಕಳೆದ ಮೂವತ್ತು ವರ್ಷಗಳಿಂದ ಗ್ರಾಮೀಣ ಕ್ರೀಡಾಕೂಟವನ್ನು ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಗ್ರಾಮೀಣ ಭಾಗದ ಕ್ರೀಡಾಪ್ರತಿಭೆಗಳನ್ನು ಇಂತಹ ಕ್ರೀಡಾಕೂಟಗಳಲ್ಲಿ ಗುರುತಿಸಿ ಪ್ರೋತ್ಸಾಹ ನೀಡಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿರುವ ಹೆಚ್ಚಿನ ಜನರು ಉನ್ನತ ಹುದ್ದೆಯನ್ನು ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಕ್ರೀಡೆಯಲ್ಲಿ ಆಸಕ್ತಿ ಇರುವ ಯುವಕರು ಕ್ರೀಡಾಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.


ಕೆಂಚಮ್ಮನ ಬಾಣೆಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಹಾಗೂ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.


ಸೇವಾ ಸಂಘದ ಅಧ್ಯಕ್ಷ ಕೆ.ಜೆ.ಸುನಿಲ್ ಮಾತನಾಡಿ, ರಸ್ತೆ ಹಾಗೂ ರಂಗಮಂದಿರ ಕಾಮಗಾರಿಗೆ ಅನುದಾನ ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಗ್ರಾಮೀಣಾಭಿವೃದ್ಧಿಗೆ ಸೇವಾ ಸಂಘ ಹೆಚ್ಚಿನ ಪಾತ್ರ ವಹಿಸಿದೆ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.


ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗ್ರಾಮದವರಾದ ಕೆ.ಪಿ.ಸುದರ್ಶನ್(ರಾಜಕೀಯ ಕ್ಷೇತ್ರ), ಬಿ.ಎ.ಯೋಗೇಶ್(ಉದ್ದಿಮೆ), ವಿ.ಜಿ.ವಿಕೇಶ್(ಆರೋಗ್ಯ), ಬಿ.ಎಸ್.ಭರತ್(ಉದ್ದಿಮೆ), ಜೋಸ್ಮಿತಾ ಪ್ರಮಿತ್(ನ್ಯಾಯಾಂಗ), ಬಿ.ಎಸ್.ಆನಂದ್(ರಾಜಕೀಯ) ಅವರನ್ನು ಸನ್ಮಾನಿಸಲಾಯಿತು.

  • ಗ್ರಾಮದ ಬಲಮುರಿ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ.ಸೋಮಶೇಖರ್, ಸೇವಾಸಂಘದ ಮಾಜಿ ಅಧ್ಯಕ್ಷ ಬಿ.ಸಿ.ಪೂಣಚ್ಚ, ಹಾಲಿ ಉಪಾಧ್ಯಕ್ಷ ಕೆ.ಜಿ.ವಿಜಯಕುಮಾರ್, ಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಬಿ.ಎ.ಭಾಸ್ಕರ್, ಪ್ರಮುಖರಾದ ಬಿ.ಬಿ.ಸತೀಶ್, ಮಿಥುನ್ ಹಾನಗಲ್, ಚೇತನ್, ಕೆ.ಪಿ.ಉಲ್ಲಾಸ್, ಅರುಣ್ ಕಾಳಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net