

ಪಾಂಡವಪುರ: ತಾಲೂಕಿನ ಜಯಂತಿನಗರದ ಶ್ರೀ ಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಸೆ.26 ಮತ್ತು 27ರಂದು ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಪಂಚಲಿಂಗೇಗೌಡ ತಿಳಿಸಿದರು.
ಸೆ.26ರಂದು ಬೆಳಗ್ಗೆ 9.30ಕ್ಕೆ ಕೃಷಿ ಸಚಿವ ಎನ್.ಚಲವರಾಯಸ್ವಾಮಿ ಧ್ವಜಾರೋಹಣ ನೆರವೇರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆಯಲ್ಲಿ ನಿವೃತ್ತ ಕ್ರೀಡಾ ತರಬೇತುದಾರ ವೈ.ಎಸ್.ಲಕ್ಷ್ಮ್ಮೀಶ್ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಉಪವಿಭಾಗಾಧಿಕಾರಿ ಎಲ್.ಎಂ.ನಂದೀಶ್ ಕ್ರೀಡಾಜ್ಯೋತಿ ಸ್ವೀಕರಿಸುವರು, ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಉಮೇಶ್ ಕ್ರೀಡಾಪಟುಗಳನ್ನು ಕುರಿತು ಹಿತನುಡಿಗಳನ್ನಾಡುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ರೀಡಾಕೂಟದಲ್ಲಿ ಜಿಲ್ಲೆಯ 163 ಕಾಲೇಜುಗಳಿಂದ ಸುಮಾರು 2500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದು, ಅಥ್ಲೆಟಿಕ್ಸ್ ಹಾಗೂ 6 ಪಂದ್ಯಗಳು ನಡೆಯಲಿದೆ. ಉಳಿದ ಕ್ರೀಡೆಗಳನ್ನು ಅ.30 ಹಾಗೂ 31 ರಂದು ನಡೆಸಲಾಗುತ್ತದೆ. ಕ್ರೀಡಾಂಗಣ ಹಾಗೂ ಕ್ರೀಡಾ ಸಲಕರಣೆಗಳ ಸಿದ್ಧ್ದತೆ ಕಾರ್ಯ ಪೂರ್ಣಗೊಂಡಿದ್ದು, ಕ್ರೀಡಾಕೂಟದ ಯಶಸ್ಸಿಗೆ ಜಿಲ್ಲಾ ಉಪ ನಿರ್ದೇಶಕರ ನೇತೃತ್ವದಲ್ಲಿ ಎರಡು ಸಭೆಗಳನ್ನು ನಡೆಸಲಾಗಿದೆ. ಕ್ರೀಡಾಪಟುಗಳಿಗೆ ಊಟ, ವಸತಿ ಸೌಲಭ್ಯ ಒದಗಿಸಲಾಗುವುದು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಮತ್ತು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸ.ಪ. ಪೂರ್ವ ಕಾಲೇಜು ಪ್ರಾಂಶುಪಾಲ ಶಿವಮಾದೇಗೌಡ, ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್.ಎನ್.ರಾಮಕೃಷ್ಣೇಗೌಡ, ಎಸ್‌ಎಸ್‌ಇಟಿ ಕಾಲೇಜು ಪ್ರಾಂಶುಪಾಲೆ ಸೌಮ್ಯಾ, ಕ್ರೀಡಾ ಸಂಯೋಜಕ ಎಸ್.ಗುರುಸ್ವಾಮಿ, ರುದ್ರಪ್ಪ ಇತರರು ಇದ್ದರು.