

ಕಾರವಾರ Sports Police : ಸಾರ್ವಜನಿಕರು ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಪೊಲೀಸ್ ಇಲಾಖೆಯವರೇ ಮುಖ್ಯ ಕಾರಣ. ದಿನದ 24 ಗಂಟೆಯೂ ತಮ್ಮನ್ನು ತಾವು ಕರ್ತವ್ಯದಲ್ಲಿ ತೊಡಗಿಸಿಕೊಂಡು ಸಮಾಜವನ್ನು ಹಾಗೂ ನಮ್ಮನ್ನು ರಕ್ಷಣೆ ಮಾಡುವುದರಲ್ಲಿ ಪೊಲೀಸ್‌ರ ಪಾತ್ರ ಅಪಾರವಾದುದು ಎಂದು ಶಿರಸಿ ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹೇಳಿದರು.
ಅವರು ಗುರುವಾರ ಕಾರವಾರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಶ್ರಮದ ಜೀವನ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕ್ರೀಡೆ ಉತ್ತಮ ಆರೋಗ್ಯಕ್ಕೆ ಸಹಕಾರವಾಗಲಿದ್ದು, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧಿಸುವುದು ಮುಖ್ಯ ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳಸಿಕೊಳ್ಳಬೇಕು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್. ಎಂ ಸ್ವಾಗತಿಸಿ ಮಾತನಾಡಿ, ಪೊಲೀಸರು ಕ್ರೀಡಾಕೂಟದ ಸ್ಪರ್ಧೆಯಲ್ಲಿ ತೋರಿದ ಪ್ರಾವಿಣ್ಯತೆ, ಶಕ್ತಿ ಸಾಮರ್ಥ್ಯ, ಚಾತುರ್ಯತೆ, ಉತ್ಸಾಹವನ್ನು ಠಾಣೆಯಲ್ಲಿ ಹಾಗೂ ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಮತ್ತು ಸಮಾಜದಲ್ಲಿನ ಘಾತಕ ಶಕ್ತಿಯ ವಿರುದ್ದ ತೋರಿಸಬೇಕು , ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತರ ಕನ್ನಡ ಜಿಲ್ಲೆಯು ಇನ್ನಷ್ಟೂ ಹೆಸರು ತರಲು ಕಾರಣಕರ್ತರಾಗಿ ಎಂದರು.
ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಲಿಮಿಟಿಡ್ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಮಾತನಾಡಿ, ಪೊಲೀಸ್ ಇಲಾಖೆ ಸೇವೆಯು ಅತ್ಯಂತ ಒತ್ತಡಕರವಾಗಿರುವುದರಿಂದ ಪೊಲೀಸರು ದೈಹಿಕವಾಗಿ ಸದೃಢರಾಗಿರಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯ ಕ್ಷಮತೆಗೆ ಕ್ರೀಡಾಕೂಟಗಳು ಸಹಾಯಕಾರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಕರವಾರದ ಗ್ರಾಸಿಮ್ ಕೆಮಿಕಲ್ಸ್ ಲಿಮಿಟೆಡ್‌ನ ಯೂನಿಟ್ ಹೆಡ್ ಕುಶ್ ಶರ್ಮಾ, ಕ್ರೀಡಾಪಟು, ಇನಾಯಿತ್ ವುಲ್ಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಹಾಗೂ ಇಲಾಖೆಯ ಅಧಿಕಾರಿಗಳು ಸಿಬಂದ್ದಿಗಳು ಉಪಸ್ಥಿತರಿದ್ದರು.