

ಕಲಬುರಗಿ: ನಗರದ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಶರಣಬಸವೇಶ್ವರ ಸಂಸ್ಥಾನದ ಶ್ರೀ ಚಿ.ದೊಡ್ಡಪ್ಪ ಅಪ್ಪ ಸಾನ್ನಿಧ್ಯ ವಹಿಸಿ, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಪೂಜ್ಯ ದೊಡ್ಡಪ್ಪ ಅಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕ್ರೀಡಾಜ್ಯೋತಿ ಸ್ವೀಕರಿಸಲಾಯಿತು.
ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಒಲಿಂಪಿಕ್ ಧ್ವಜಾರೋಹಣಗೈಯಲಾಯಿತು. ಸಿಪಿಐ ಶಿವಾನಂದ ವಾಲೀಕಾರ ಮಾತನಾಡಿ, ಆಟೋಟಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಸದೃಢ ಶರೀರದೊಂದಿಗೆ ಮನಸ್ಸು ಇರುತ್ತದೆ ಎಂದರು. ದೈಹಿಕ ಶಿಕ್ಷಣ ಅಧಿಕಾರಿ ಶಿವಶರಣಪ್ಪ ಮಂಠಾಳೆ ಮಾತನಾಡಿ, ಮಕ್ಕಳಿಗಾಗಿ ಕ್ರೀಡಾಕೂಟ ಮಾಡುವುದು ಅವಶ್ಯವಿದೆ. ಮಕ್ಕಳ ಕ್ರೀಡಾ ಉತ್ಸಾಹಕ್ಕೆ ಹುರಿದುಂಬಿಸಿ, ಶುಭ ಹಾರೈಸಿದರು. ಹಿರಿಯ ಶಿಕ್ಷಕಿ ಶಾರದಾ ರಾಂಪುರೆ ಅಧ್ಯಕ್ಷತೆ ವಹಿಸಿದ್ದರು.