

ಪುತ್ತೂರು ಗ್ರಾಮಾಂತರ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವ ಕೆಲಸ ಮಾಡಬೇಕು. ಮಕ್ಕಳಿಗೆ ಆಹಾರ ಪದ್ಧತಿಯ ಕುರಿತು ಕೌನ್ಸೆಲಿಂಗ್ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಮಾಹಿತಿ ಶಿಬಿರಗಳನ್ನು ನಡೆಸಲಾಗುವುದು ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸವಣೂರು ವಲಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಯ 17ರ ವಯೋಮಾನದ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜ ಧ್ವಜಾರೋಹಣಗೈದರು. ಪಂಚಾಯಿತಿ ಮಾಜಿ ಕಾರ್ಯದರ್ಶಿ ಬಾಲಕೃಷ್ಣ ರೈ ನೆಟ್ಟಾಳ ಮತ್ತು ಪ್ರಗತಿಪರ ಕೃಷಿಕ ಸಂತೋಷ್ ರೈ ಇಳಂತಾಜೆ ಕ್ರೀಡಾಜ್ಯೋತಿ ಬೆಳಗಿದರು. ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್‌ಕುಮಾರ್ ಮಾಡಾವು ಕ್ರೀಡಾಕೂಟ ಉದ್ಘಾಟಿಸಿದರು. ಕೆಪಿಎಸ್ ಪ್ರಾಂಶುಪಾಲೆ ಹಸೀನಾಬಾನು ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಕೆಪಿಎಸ್ ಕಾರ್ಯಾಧ್ಯಕ್ಷ ಎ.ಕೆ.ಜಯರಾಮ ರೈ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ನವೀನ್ ಸ್ಟೀವನ್ ವೇಗಸ್, ಕೆಯ್ಯೂರು ಗ್ರಾಪಂ ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ.ರೈ, ಅಬ್ದುಲ್‌ಖಾದರ್ ಮೇರ್ಲ, ಸವಣೂರು ವಲಯದ ನೋಡೆಲ್ ಅಧಿಕಾರಿಗಳಾದ ಬಾಲಕೃಷ್ಣ ಮತ್ತು ಕೃಷ್ಣಪ್ರಸಾದ್, ದೈಹಿಕ ಶಿಕ್ಷಣ ಶಿಕ್ಷಕರಾದ ಮಾಮಚ್ಚನ್ ಎಂ., ಮೋನಪ್ಪ ಪಟ್ಟೆ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಮಿತ್‌ರಾಜ್, ಕೆಯ್ಯೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ರೈ ದೇರ್ಲ, ಉಮಾಕಾಂತ್ ಬೈಲಾಡಿ, ದಾಮೋದರ ಪೂಜಾರಿ ಕೆಂಗುಡೇಲು ಮತ್ತಿತರರಿದ್ದರು. ಕೆಪಿಎಸ್ ಪ್ರಾಥಮಿಕ ಶಾಲಾ ವಿಭಾಗ ಮುಖ್ಯ ಶಿಕ್ಷಕ ಬಾಬು ಎಂ. ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ಪಿ. ವಂದಿಸಿದರು. ಕೆಪಿಎಸ್ ಉಪಪ್ರಾಂಶುಪಾಲ ಕೆ.ಎಸ್.ವಿನೋದ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಮುಂಡೂರಿನಲ್ಲಿ 15 ಎಕರೆ ಜಾಗದಲ್ಲಿ ಅಥ್ಲೆಟಿಕ್‌ಗಾಗಿ ಸಿಂಥೆಟಿಕ್ ಟ್ರ್ಯಾಕ್ ಒಳಗೊಂಡ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಕೊಂಬೆಟ್ಟು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟಕ್ಕಾಗಿ 1 ಕೋಟಿ ರೂ. ವೆಚ್ಚದಲ್ಲಿ ಹೊನಲು ಬೆಳಕಿನ ವ್ಯವಸ್ಥೆ, 1 ಕೋಟಿ ರೂ. ವೆಚ್ಚದಲ್ಲಿ ಜಿಮ್ ವ್ಯವಸ್ಥೆ, ಶಟ್ಲ್ ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಮಿಸಲಾಗುವುದು. ಅಶೋಕ್ ಕುಮಾರ್ ರೈ, ಶಾಸಕ