

ನರೇಗಲ್ಲ: ಕ್ರೀಡೆಗಳಿಂದ ದೇಹ ಮತ್ತು ಮನಸು ಸದೃಢವಾಗಿರುತ್ತದೆ ಎಂದು ಎಸ್ಎವಿವಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಹೇಳಿದರು.
ಪಟ್ಟಣದ ಬಸವೇಶ್ವರ ಸಿಬಿಎಸ್ಇ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಯುವ ಜನರಲ್ಲಿ ಕ್ರೀಡಾ ಮನೋಭಾವನೆ ಕುಂಠಿತವಾಗುತ್ತಿದೆ. ಯುವ ಜನತೆಯಲ್ಲಿ ಕ್ರೀಡಾಸಕ್ತಿ ಬೆಳೆಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿವೆ. ಯುವಜನಾಂಗ ಮೊಬೈಲ್ಫೋನ್ನಿಂದ ದೂರವಿದ್ದು, ಆದಷ್ಟು ಸಮಯವನ್ನು ಅಭ್ಯಾಸ ಮತ್ತು ಕ್ರೀಡೆಗಳತ್ತ ಚಿತ್ತ ಹರಿಸಬೇಕು. ಸ್ವಸ್ಥ ಮನಸು, ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಚೇರ್ಮನ್ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಆಧುನಿಕತೆಯ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳ ಉಳಿವಿಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಿದೆ. ವಿದ್ಯಾರ್ಥಿಗಳು ಬರೀ ಓದಿಗೆ ಮಹತ್ವ ನೀಡದೇ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಲ್ಲಿಯೂ ಗಮನ ಹರಿಸಬೇಕಿದೆ ಎಂದರು.
ಪ್ರಾಚಾರ್ಯ ಬಿ.ಎಚ್. ಬಂಡಿಹಾಳ ಮಾತನಾಡಿ, ಆರೋಗ್ಯವೇ ಭಾಗ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾನಸಿಕ, ದೈಹಿಕವಾಗಿ ಹಾಗೂ ಉತ್ತಮ ಆರೋಗ್ಯ ಪಡೆಯಲು ಕ್ರೀಡೆಗಳು ಜೀವನದಲ್ಲಿ ಬಹಳ ಅವಶ್ಯಕ ಎಂದರು.
ಕೆ.ವಿ. ಬಿ.ಎಂ ಉಚಿತ ಪ್ರಸಾದ ನಿಲಯದ ಚೇರ್ಮನ್ ಮಲ್ಲಿಕಾರ್ಜುನಪ್ಪ ಮೆಣಸಗಿ, ಶಾಲಾ ಆಡಳಿತ ಮಂಡಳಿ ಸದಸ್ಯರುಗಳಾದ ಡಾ. ಜಿ.ಕೆ. ಕಾಳೆ, ಸದಾಶಿವ ಕರಡಿ, ವಿ.ಬಿ. ಸೋಮನಕಟ್ಟಿಮಠ, ದೈಹಿಕ ಶಿಕ್ಷಣ ಶಿಕ್ಷಕ ಜೆ.ಎಚ್. ಹಾಲಕೆರೆ ಸೇರಿ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು. ಶಿಕ್ಷಕ ಕುಮಾರ ಹರ್ಲಾಪೂರ ಸ್ವಾಗತಿಸಿದರು. ಶಿಕ್ಷಕಿಯರಾದ ಅನುರಾಧಾ ಕರಡಿ ಹಾಗೂ ಗೀತಾ ಬಡಿಗೇರ ಕಾರ್ಯಕ್ರಮ ನಿರ್ವಹಿಸಿದರು.