

ಚಿಕ್ಕಮಗಳೂರು: ಪಠ್ಯದ ಜೊತೆಗೆ ಕ್ರೀಡೆಯು ಒಂದು ಶಿಕ್ಷಣವಿದ್ದಂತೆ. ಮಾನಸಿಕ ಸ್ಥಿತಿಗತಿಯನ್ನು ಸಮತೋಲನದಲ್ಲಿಡಲು ಕ್ರೀಡೆ ಅತ್ಯಂತ ಸಹಕಾರಿ. ಮಕ್ಕಳು ಆಟೋಟ ಸ್ಪರ್ಧೆಗಳಲ್ಲಿ ಖುಷಿಯಾಗಿ ಭಾಗವಹಿಸಿ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಿಳಿಸಿದರು.
ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾ ಧಿಕಾರಿ ಕಾರ್ಯಾಲಯ ಹಾಗೂ ಶ್ರೀಪ್ರಭುಲಿಂಗಸ್ವಾಮಿ ಪ್ರೌಢಶಾಲೆ ಸಹಯೋಗದಲ್ಲಿ ತಾಲೂಕು ಸಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕ್ರೀಡಾಕೂಟ ಹಾಗೂ ಪ್ರತಿಭಾ ಪುರಸ್ಕಾರದಂಥ ಕಾರ್ಯಕ್ರಮಗಳಿಗೆ ಸರ್ಕಾರ ಕೇವಲ ಐದರಿಂದ ಹತ್ತು ಸಾವಿರ ನೀಡುವ ವ್ಯವಸ್ಥೆಯಿದೆ. ಇದರಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ತಾವು ಕೂಡಾ ವಿಧಾನ ಪರಿಷತ್ ಸಭೆಗಳಲ್ಲಿ ಚರ್ಚಿಸುವ ಮೂಲಕ ಸರ್ಕಾರದ ಕಣ್ತರೆಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕ್ರೀಡಾಚಟುವಟಿಕೆ ಆಯೋಜಿಸುವ ನಿಟ್ಟಿನಲ್ಲಿ ಸರ್ಕಾರ ಸಮರ್ಪಕ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಹೇಗೆಂದು ವಿಷಾಧಿಸಿದ ಅವರು ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಒದಗಿಸಿದರೆ ಮಾತ್ರ ಕ್ರೀಡಾ ಜಗತ್ತಿನಲ್ಲಿ ಸಾಧನೆಗೈಯಲು ಸಾಧ್ಯ ಎಂದು ಹೇಳಿದರು.
ಇತ್ತೀಚೆಗೆ ಓರ್ವ ಸಚಿವರು ರಾಜ್ಯದ ಮಕ್ಕಳನ್ನು ಒಲಂಪಿಕ್ಸ್ ಕಳುಹಿಸುತ್ತೇವೆ ಎಂದು ಹೇಳಿದ್ದರು. ಆದರೆ ರಾಜ್ಯದ ೧,೫೪೮ ಪಿಯು ಕಾಲೇಜುಗಳಲ್ಲಿ ಪಿಯು ಉಪನ್ಯಾಸಕರ ಕೊರತೆಯಿದೆ. ಅಲ್ಲದೇ ಪ್ರಾಥಮಿಕ ಶಾಲೆಯಿಂದ ಕಾಲೇಜುವರೆಗೆ ಅನೇಕ ವಿಷಯಗಳ ಅಧ್ಯಯನಕ್ಕೆ ಶಿಕ್ಷಕರಿಲ್ಲ. ಅತಿಥಿ ಶಿಕ್ಷಕರ ಮೂಲಕವೇ ಪಾಠ ಕೇಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತೇವೆ ಎಂದು ಭಾಷಣದ ಹೇಳುವುದನ್ನು ಬಿಟ್ಟು ಶಾಲೆಗಳಿಗೆ ಉತ್ತಮ ಶಿಕ್ಷಕರು, ಕಟ್ಟಡ ಹಾಗೂ ಶೌಚಗೃಹದ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಲು ಸಾಧ್ಯ ಎಂದು ಹೇಳಿದರು.
ಹಿಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಅನೇಕ ವಿಷಯಗಳಿಗೆ ಸಮರ್ಪಕ ಶಿಕ್ಷಕರಿದ್ದರು. ಕಾಲಬದಲಾದಂತೆ ಸರ್ಕಾರ ಶಿಕ್ಷಕರನ್ನು ನೇಮಿಸದಿರುವ ಕಾರಣ ಅನೇಕ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿದೆ. ಇದರಿಂದ ಹೆಚ್ಚಾಗಿ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸದ ಮೇಲೆ ತೀವ್ರ ಸಮಸ್ಯೆ ಎದುರಾಗಲಿದೆ. ಶೀಘ್ರದಲ್ಲೇ ಶಿಕ್ಷಕರನ್ನು ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ದೈನಂದಿನ ದಿನಚರಿಯಲ್ಲಿ ಕ್ರೀಡೆ ಹಾಗೂ ವ್ಯಾಯಾಮವನ್ನು ಅಳವಡಿಸಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕ್ರೀಡಾ ಸ್ಪರ್ಧೆಯಲ್ಲಿ ಸೋಲು, ಗೆಲುವು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗೆದ್ದವರು ಬೀಗದೇ, ಸೋತವರು ಕುಗ್ಗದೇ ಮುಂದಿನ ಪ್ರಯತ್ನದಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.
ಶ್ರೀ ಪ್ರಭುಲಿಂಗಸ್ವಾಮಿ ಪ್ರೌಢಶಾಲೆ ಮುಖ್ಯಶಿಕ್ಷಕ ಎನ್.ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ದೈಹಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜಿಸಿ ಪ್ರೇರೇಪಿಸುವ ಕಾರ್ಯಕ್ಕೆ ಮುಂದಾಗಿz್ದೆÃವೆ. ಅದರಂತೆ ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಬೃಹತ್ ಮಟ್ಟದಲ್ಲಿ ಸ್ಪರ್ಧೆ ನಡೆಸುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಪ್ರಭುಲಿಂಗ ಸ್ವಾಮಿ ಪ್ರೌಢಶಾಲೆ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಾ. ಎಸ್.ವಿನಾಯಕ್ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್, ಸ್ಥಳೀಯ ಸಲಹಾ ಸಮಿತಿ ಸದಸ್ಯ ಎಚ್.ಎಂ.ನಾರಾಯಣ್, ಪಿಎಸಿಎಸ್ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ, ನಮ್ಮ ಸ್ನೇಹಲೋಕ ಅಧ್ಯಕ್ಷ ಎಚ್.ಸಿ.ಗಂಗಾಧರ್, ಉದ್ಯಮಿ ಜಗದೀಶ್, ಸಿಡಿಎ ಮಾಜಿ ಸದಸ್ಯ ಎಚ್.ಎಂ.ರಾಜ್‌ಕುಮಾರ್, ಆಶ್ರಯ ಸಮಿತಿ ಸದಸ್ಯ ರಾಮಚಂದ್ರಪ್ಪ, ಪ್ರಮುಖರಾದ ಹಿರೇಮಗಳೂರು ರಾಮಚಂದ್ರ, ಎಚ್.ಜೆ.ಶಿವಕುಮಾರ್, ರವಿಕುಮಾರ್, ಎಚ್.ಪಿ.ಶಿವಕುಮಾರ್ ಮತ್ತಿತರರಿದ್ದರು.