

ಮಂಗಳೂರು: ಕ್ರೀಡಾಕೂಟವು ಗುರಿಯನ್ನು ನಿಶ್ಚಯ ಮಾಡುವ ಪಾಠ. ಕ್ರೀಡೆಯು ಆತ್ಮವಿಶ್ವಾಸ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಸಹಕಾರಿ ಆಗಿದ್ದು, ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯ ಮೂಲವಾಗಿದೆ. ಕ್ರೀಡೆಯಿಂದ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುವುದು ಮಾತ್ರವಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಯು ಪ್ರಮುಖ ಕಾರಣ ಎಂದು ಆದಾಯ ತೆರಿಗೆ ಆಯುಕ್ತ ಶಿಶಿರ್ ಶ್ರೀವಾಸ್ತವ ಹೇಳಿದರು.
ಆದಾಯ ತೆರಿಗೆ ಇಲಾಖೆ ದಿನಾಚರಣೆಯ ಪ್ರಯುಕ್ತ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರ ಕಚೇರು, ಆದಾಯ ತೆರಿಗೆ ಮಂಗಳೂರು ವಿಭಾಗ ಸಹಯೋಗದೊಂದಿಗೆ ಆದಾಯ ತೆರಿಗೆ ಕ್ರೀಡಾ, ಮನೋರಂಜನೆ ಕೂಟ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಭಾಗಿತ್ವದಲ್ಲಿ ಆದಾಯ ತೆರಿಗೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಕ್ರೀಡೆಗಳು ಮನಸ್ಸಿಗೆ ಮುದ ನೀಡುವಂತೆ ದೈಹಿಕ ಪೋಷಣೆಗಳಿಗೂ ಸಹಾಯಕವಾಗುತ್ತವೆ. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ, ಶಿಸ್ತು, ಸಹಬಾಳ್ವೆಗಳಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಬಂಧಗಳ ವೃದ್ಧಿಗಳಿಗೂ ಕ್ರೀಡೆಗಳು ಅಗತ್ಯವಾಗಿವೆ. ಮನುಷ್ಯ ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಆತ್ಮವಿಶ್ವಾಸದೊಂದಿಗೆ ದಿಟ್ಟ ಹೆಜ್ಜೆಗಳನ್ನು ಇರಿಸಬೇಕು. ಆಲೋಚನೆಗಳು, ನಿರ್ಧಾರಗಳು ಅಚಲವಾಗಿದ್ದಾಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ ಎಂದರು.
ಆದಾಯ ತೆರಿಗೆ ಕ್ರೀಡಾ ಹಾಗೂ ಮನೋರಂಜನೆ ಕೂಟದಿಂದ ದಕ್ಷಿಣ ಕನ್ನಡ ಜಿಲ್ಲಾ ಕಿರಿಯ ಪ್ರಾಥಮಿಕ ಶಾಲೆಗೆ ಆಟೋಟದ ಉಪಕರಣಗಳನ್ನು ಹಸ್ತಾಂತರಿಸಲಾಯಿತು. ಆದಾಯ ತೆರಿಗೆ ಇಲಾಖಾ ಸಿಬ್ಬಂದಿ ವರ್ಗದವರಿಂದ ವಿವಿಧ ವಿನೋದಾವಳಿ, ಮನೋರಂಜನೆ ಜರುಗಿತು. ಪರಿವರ್ತನೆ ಎಂಬ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ಈ ಕಿರು ನಾಟಕದ ಕಥೆ ಹಾಗೂ ನಿರ್ದೇಶನ ರಂಗಕಲಾವಿದ ತಮ್ಮಲಕ್ಷ್ಮಣ ಅವರು ನಿರ್ದೇಶಿಸಿದ್ದರು.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಶಂಕರ್ ಗಣೇಶ್ ಹಾಗೂ ವೈಶಕ್ ಪಿ ಆರ್ ವಂದಿಸಿದರು. ಸೀಮಾ ನಿರೂಪಿಸಿದರು.
--------------------
ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಗಳು ಸ್ಪರ್ಧಾ ಮನೋಭಾವವನ್ನು ಮೂಡಿಸಲು ಸಹಾಯ ಮಾಡುತ್ತದೆ. ಕ್ರೀಡಾಪಟುಗಳಿಗೆ ದೇಶ ವಿದೇಶ ಮಟ್ಟದಲ್ಲಿ ವಿಶೇಷ ಮನ್ನಣೆಯಿದೆ. ರಾಷ್ಟ್ರೀಯ ಸಂಬಂಧಗಳ ವೃದ್ಧಿಗೆ ಕ್ರೀಡೆಗಳ ಕೊಡುಗೆ ಅಪಾರವಾಗಿದೆ. ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ.
ಶಿಶಿರ್ ಶ್ರೀವಾಸ್ತವ, ಆದಾಯ ತೆರಿಗೆ ಆಯುಕ್ತ
-------------------