ಕ್ರೀಡೆಗಳು ಆರೋಗ್ಯ ಸಂಪತ್ತಿನ ಕಣಜ

Sports is a source of health wealth
ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಣಿ ಚನ್ನಮ್ಮ ವಿವಿ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಡಾ.ಬಾಬುರಾಜೇಂದ್ರ ನಾಯಕ ಮಾತನಾಡಿದರು. ಡಾ.ಅಶೋಕಕುಮಾರ ಜಾಧವ, ಡಾ. ಪ್ರಭುಗೌಡ ಬಿರಾದಾರ, ಡಾ.ರಾಜಕುಮಾರ ಮಾಲಿಪಾಟೀಲ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಉದ್ಯಮಿ ಸಂತೋಷ ತಳಕೇರಿ ಉಪಸ್ಥಿತರಿದ್ದರು.
Published on

ವಿಜಯಪುರ: ಕ್ರೀಡೆಗಳು ನಮ್ಮ ಆರೋಗ್ಯ ಸಂಪತ್ತಿನ ಕಣಜಗಳಾಗಿವೆ. ಕ್ರೀಡಾ ಹವ್ಯಾಸದಿಂದ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ ಎಂದು ಡಾ. ಬಾಬುರಾಜೇಂದ್ರ ನಾಯಕ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದೇವರಹಿಪ್ಪರಗಿಯ ಪ್ರಥಮ ದರ್ಜೆ ಕಾಲೇಜ್ ಆತಿಥ್ಯದಲ್ಲಿ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 8ನೇ ಅಂತರ ಕಾಲೇಜ್ ಕ್ರೀಡಾಕೂಟದ ಸಮಾರಂಭ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.

ಕ್ರೀಡೆಗಳು ಪ್ರೇಮಭಾವದ ಅನನ್ಯ ಸಂಕೇತಗಳಾಗಿದ್ದು, ಹರುಷ ಇಮ್ಮಡಿಗೊಳಿಸುತ್ತವೆ. ಕ್ರೀಡಾಪಟುಗಳು ಸಮರ್ಥ ಸಿದ್ಧಿಯೊಂದಿಗೆ ಕ್ರೀಡಾ ಜ್ಞಾನ ಕರಗತ ಮಾಡಿಕೊಂಡು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗಬೇಕು. ಶರೀರದಲ್ಲಿ ಆರೋಗ್ಯ ಸಂಪತ್ತು ಬೇರೂರುವಂತೆ ನೋಡಿಕೊಳ್ಳಬೇಕು ಎಂದರು.

ಇಂದಿನ ಯುವಪೀಳಿಗೆ ದುಶ್ಚಟಗಳಿಂದ ದೂರಾಗಿ ಒಳ್ಳೆಯ ಮಾರ್ಗದೆಡೆಗೆ ಸಾಗಬೇಕು. ಆಟೋಟಗಳ ಮಹತ್ವ ಅರಿಯಬೇಕು.ಅಧ್ಯಯನಶೀಲ ಗುಣದೊಂದಿಗೆ ಸೂಕ್ಷ್ಮತೆಯ ಅವಲೋಕನ ಸದಾ ಹೊಂದಬೇಕು ಎಂದರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ. ಜಾವೀದ್ ಜಮಾದಾರ ಮಾತನಾಡಿ, ಯುವಕರು ಅನ್ಯ ಆಕರ್ಷಣೆಗಳಿಗೆ ಒಳಗಾಗಬಾರದು. ಉತ್ತಮ ಹವ್ಯಾಸಗಳು ಜ್ಞಾನಾರ್ಜನೆಗೆ ಪೂರಕವಾಗಿವೆ. ಇದನ್ನು ಯುವಜನತೆ ಮನಗಾಣಬೇಕು. ಪಠ್ಯೇತರ ಚಟುವಟಿಕೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿ ಹೊಂದಬೇಕು ಎಂದರು.

ಕೂಟದ ಸಂಘಟನಾ ಕಾರ್ಯದರ್ಶಿ ಡಾ.ಅಶೋಕಕುಮಾರ ಜಾಧವ, ಡಾ. ಪ್ರಭುಗೌಡ ಬಿರಾದಾರ, ಡಾ.ರಾಜಕುಮಾರ ಮಾಲಿಪಾಟೀಲ, ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಉದ್ಯಮಿ ಸಂತೋಷ ತಳಕೇರಿ ಸೇರಿ ಹಲವರು ಉಪಸ್ಥಿತರಿದ್ದರು.

ದ್ವೇಷ, ರಾಗ, ಮೋಹ, ಭಯ, ಮೌಢ್ಯಗಳ ಸಂಕೋಲೆಯಿಂದ ಹೊರಬರಬೇಕು. ವಿವಿಧೆಡೆಯಿಂದ ಬಂದ ಕ್ರೀಡಾಪಟುಗಳು ವಿಶೇಷ ಸಾಧನೆಯ ಛಾಪು ಮೂಡಿಸಿ ವಿಶ್ವವಿದ್ಯಾಲಯಕ್ಕೆ ಹೆಸರು ತಂದಿದ್ದಾರೆ.
ಅಶೋಕ ಹೆಗಡೆ, ಪ್ರಾಚಾರ್ಯ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net