

ಸಿದ್ದಾಪುರ: ಕ್ರೀಡೆಯಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಶಕ್ತಿ ಹೆಚ್ಚಾಗುವುದಲ್ಲದೆ ಮಕ್ಕಳನ್ನು ದುಶ್ಚಟಗಳಿಂದ ದೂರ ಉಳಿಯುವಂತೆ ಮಾಡಬಹುದು ಎಂದು ನೇತಾಜಿ ಶಾಲೆಯ ಫುಟ್ಬಾಲ್ ತರಬೇತುದಾರ ವಿಜೇಶ್ ಅಭಿಪ್ರಾಯಪಟ್ಟರು.
ಅಮ್ಮತ್ತಿ ನೇತಾಜಿ ಶಾಲೆಯಲ್ಲಿ ನೇತಾಜಿ ಸ್ಪೋರ್ಟ್ಸ್ ಆಕಾಡೆಮಿ ಏರ್ಪಡಿಸಿರುವ ಫುಟ್ಬಾಲ್ ತರಬೇತಿ ಶಿಬಿರದಲ್ಲಿ ಮಾತನಾಡಿ, 45 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೂ ಕ್ರೀಡೆಯಲ್ಲಿ ಉತ್ತಮ ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡುವ ಮಕ್ಕಳನ್ನು ಬೆಂಗಳೂರಿನಲ್ಲಿ ಕರ್ನಾಟಕ ಸ್ಟೇಟ್ ಪುಟ್ಬಾಲ್ ಅಸೋಸಿಯೇಷನ್ ವತಿಯಿಂದ ನಡೆಯುವ ಯೂತ್ ಲೀಗ್ ಪಂದ್ಯಕ್ಕೆ ಕೊಡಗಿನ ತಂಡದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗುವುದು ಎಂದರು.
ಮಕ್ಕಳಿಗೆ ಉತ್ತಮ ಫುಟ್ಬಾಲ್ ತರಬೇತಿ ನೀಡಿ, ಮುಂದೆ ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸಲಾಗುವುದು. ಈ ಹಿಂದೆ ನಡೆದ ಶಿಬಿರದಲ್ಲಿ ತರಬೇತಿ ಪಡೆದ ಮೂವರು ಮಕ್ಕಳು ಬೆಂಗಳೂರಿನಲ್ಲಿ ನಡೆಯುವ ಪಂದ್ಯಕ್ಕೆ ಈಗಾಗಲೇ ಆಯ್ಕೆಯಾಗಿರುವುದಾಗಿ ತಿಳಿಸಿದರು.
ನೇತಾಜಿ ಶಾಲೆಯ ಮೈದಾನದಲ್ಲಿ ನಡೆಯುವ ಫುಟ್ಬಾಲ್ ತರಬೇತಿ ಶಿಬಿರದಲ್ಲಿ ಈಗಾಗಲೇ 36 ಮಕ್ಕಳು ಹೆಸರು ನೋಂದಾಯಿಸಿದ್ದಾರೆ ತಿಳಿಸಿದರು.
ಕೊಡಗು ಫುಟ್ಬಾಲ್ ಆಸೋಷಿಯೆಷನ್ ಕಾರ್ಯದರ್ಶಿ ನಾಗೇಶ್, ಸದಸ್ಯರಾದ ಲಿಜೇಶ್ ಸೇರಿದಂತೆ ಶಾಲಾ ಮುಖ್ಯಸ್ಥ ಹರ್ಷದ್ ತರಬೇತಿ ಪಡೆಯುತ್ತಿರುವ ಮಕ್ಕಳು ಇದ್ದರು.