ಕ್ರೀಡಾಕೂಟದಿಂದ ಫಲಾಪೇಕ್ಷೆಯಿಲ್ಲದ ಸಮಚಿತ್ತ ಭಾಗ್ಯ

swamiji
Published on

ಗೋಕರ್ಣ: ಹುಟ್ಟಿನಿಂದ ಪಡೆದ ನಾನಾವಿಧದ ನಕಾರಾತ್ಮಕ ಅಂಶಗಳನ್ನು ಕ್ರೀಡೆ ಮಾತ್ರ ನಾಶವಾಗಿಸಬಲ್ಲದು. ಫಲಾಫಲ ಅಪೇಕ್ಷೆಯನ್ನು ನೀಗಿಸಿ ಸಮಚಿತ್ತ ಭಾಗ್ಯವನ್ನು ಕೊಡುವ ಶಕ್ತಿ ಕ್ರೀಡೆಗೆ ಮಾತ್ರವಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಇಲ್ಲಿನ ಅಶೋಕೆಯ ವಿಷ್ಣುಗುಪ್ತ ವಿಶ್ವದ್ಯಾಪೀಠದ ಸಾರ್ವಭೌಮ ಗುರುಕುಲದಲ್ಲಿ ಎರಡು ದಿನ ಜರುಗಿದ ಕ್ರೀಡೋತ್ಸವ ಉದ್ಘಾಟಿಸಿ ಶ್ರೀಗಳು ಆಶೀರ್ವಾದ ಅನುಗ್ರಹಿಸಿದರು.

‘ನಾವು ಮಣ್ಣಿನ ಮಕ್ಕಳು ಎಂದು ಎಷ್ಟೋ ಜನ ಕರೆದುಕೊಳ್ಳುತ್ತಾರೆ. ಆದರೆ ಮಣ್ಣಲ್ಲಿ ಮೈಮರೆತು ಆಟವಾಡುವರೇ ನಿಜವಾದ ಮಣ್ಣಿನ ಮಕ್ಕಳು. ನಾವು ಬಂದಿದ್ದು ಮಣ್ಣಿನಿಂದ. ಬಾಳುವುದು ನೀರು ಮತ್ತು ಅನ್ನವನ್ನೀಯುವ ಮಣ್ಣಿನಿಂದ. ಹೋಗುವುದು ಮತ್ತದೇ ಮಣ್ಣಿಗೆ. ಇದರಿಂದಾಗಿ ಮಣ್ಣನ್ನು ಮಾತೆ, ನಮ್ಮ ತಾಯಿ ಎನ್ನಲಾಗಿದೆ. ಆದ್ದರಿಂದ ನಾವು ಅದರ ಮಕ್ಕಳು. ಎಳೆಯದಾದ ಈ ವಿದ್ಯಾರ್ಥಿ ಜೀವನ ಮಾತ್ರ ಮಣ್ಣಲ್ಲಿ ಆಟವಾಡುವ ಸುಸಮಯ. ಮಣ್ಣಲ್ಲಿ ಆಟವಾಡುವ ಮಕ್ಕಳು ಮಣ್ಣಿನಿಂದಲೇ ಮೇಲೆದ್ದು ಬರುವ ಚಿನ್ನದ ಚಿಣ್ಣರಾಗಬೇಕು. ಚೆನ್ನಾಗಿ ಆಟವಾಡುವುದು ಮಾತ್ರ ನಿಮ್ಮದಾಗಬೇಕು. ಸೋಲು-ಗೆಲವು, ಫಲ-ಅಫಲಗಳ ಚಿಂತೆ ಬೇಡ. ಭಗವಂತ ಗೀತೆಯಲ್ಲಿ ಬೋಧಿಸಿದ ಕರ್ಮಗಳಿಗೆ ಮಾತ್ರ ಅಧಿಕಾರ. ಫಲಗಳಲ್ಲಿ ಯಾವತ್ತೂ ನನ್ನ ಅಧಿಕಾರವಿಲ್ಲ ಎನ್ನುವುದನ್ನು ಎಲ್ಲ ಬಗೆಯ ಕ್ರೀಡೆ ನಿಮಗೆ ಕಲಿಸುವ ಪಾಠವಾಗಲಿ ಎಂದು ಶ್ರೀಗಳು ಹೇಳಿದರು.

ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಕರ್ಕಿ ಶ್ರೀ ಚನ್ನಕೇಶವ ಪ್ರೌಢ ಶಾಲೆ ಮುಖ್ಯಾಧ್ಯಾಪಕ ಎಲ್.ಎಂ. ಹೆಗಡೆ, ಆಡಳಿತ ಸಮಿತಿ ಅಧ್ಯಕ್ಷ ಅರುಣ ಹೆಗಡೆ ಮಾತನಾಡಿದರು. ಆಡಳಿತ ಸಮಿತಿಯ ಅಶ್ವಿನಿ ಉಡುಚೆ, ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮ, ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಆಡಳಿತ ಸಮಿತಿಯ ಮಹೇಶ ಶೆಟ್ಟಿ, ವಿನಾಯಕ ಕಾಮತ, ಸ್ವಾತಿ ಭಾಗ್ವತ, ಪ್ರಾಂಶುಪಾಲೆ ಶಶಿಕಲಾ ಕೂರ್ಸೆ ಉಪಸ್ಥಿತರಿದ್ದರು.

ಮುಖ್ಯಾಧ್ಯಾಪಕಿ ಸೌಭಾಗ್ಯ ಭಟ್ಟ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಕ್ಷಯ ಅಡಿಗುಂಡಿ, ಸದಾನಂದ ಹೆಬ್ಬಾರ ಮತ್ತು ಲೋಹಿತ ಹೆಬ್ಬಾರ ನಿರ್ವಹಿಸಿದರು. ಕಿರಣ ಜೆ. ನಾಯಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net