ಬದುಕಿನ ಸವಾಲು ಎದುರಿಸಲು ಕ್ರೀಡೆ ಸಹಕಾರಿ; ಶಂಕರ ನಾರಾಯಣ

MDK05
Published on

ಮಡಿಕೇರಿ: ಬದುಕಿನ ಸವಾಲು ಎದುರಿಸಲು ಕ್ರೀಡೆ ಸಹಕಾರಿಯಾಗಿದೆ ಎಂದು ಕೊಡಗಿನ ಹಿರಿಯ ಚೆಸ್ ಆಟಗಾರರು ಮತ್ತು ತರಬೇತುದಾರ ಎನ್.ಟಿ.ಶಂಕರ ನಾರಾಯಣ ಹೇಳಿದರು.


ಕೊಡಗು ಪತ್ರಿಕಾ ಭವನದ ೨೧ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲೆಯ ಪತ್ರಕರ್ತರಿಗಾಗಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಒಳಾಂಗಣ ಕ್ರೀಡಾಕೂಟ ಚೆಸ್ ಆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಚೆಸ್ ಕ್ರೀಡೆ ಮನಸ್ಸಿನ ಮೇಲೆ ಏಕಾಗ್ರತೆಯನ್ನು ಸ್ಥಾಪಿಸುವ ಆಟವಾಗಿದ್ದು, ಇದು ನಮ್ಮ ಜೀವನದ ಸವಾಲುಗಳನ್ನು ಎದುರಿಸಲು ಪ್ರಯೋಜನಕಾರಿಯಾಗಿದೆ. ಕೊಡಗು ರಾಜ್ಯವಾಗಿದ್ದ ಸಂದರ್ಭ ತಮ್ಮ ತಂದೆ ಕೂಡಾ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದು, ಪತ್ರಕರ್ತರಿಗಾಗಿ ಆಯೋಜಿಸಿರುವ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಭಾಗವಹಿಸಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು.


ಪತ್ರಿಕಾ ಭವನ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಟಿ.ಪಿ.ರಮೇಶ್ ಮಾತನಾಡಿ, ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸೂಕ್ತ ಸ್ಥಳವಕಾಶವಿಲ್ಲದಿದ್ದ ಸಂದರ್ಭದಲ್ಲಿ ಪತ್ರಕರ್ತರಿಗಾಗಿ ಸ್ವಂತ ಭವನವೊಂದನ್ನು ೨೧ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಪತ್ರಕರ್ತರ ಮನರಂಜನೆಗಾಗಿ ಕ್ರೀಡಾಕೂಟಗಳನ್ನು ಹಾಗೂ ಕುಟುಂಬದವರ ಸಮ್ಮಿಲನವನ್ನು ಪ್ರತೀವರ್ಷ ಆಯೋಜಿಸಿಕೊಂಡು ಬರಲಾಗುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಚಟುವಟಿಕೆ ಮತ್ತೆ ಆರಂಭವಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.


ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ವಿ.ರವಿಕುಮಾರ್ ಮಾತನಾಡಿ, ಕಳೆದ ಕೆಲವು ವರ್ಷಗಳ ಹಿಂದೆ ಪತ್ರಕರ್ತರ ಕ್ರೀಡಾಕೂಟ, ಕುಟುಂಬದ ಸಮ್ಮಿಲನ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ಈ ಕಾರ್ಯಕ್ರಮ ಮತ್ತೆ ಆರಂಭಗೊಂಡಿರುವುದು ಪತ್ರಕರ್ತರಾದ ತಮಗೆಲ್ಲಾ ಉತ್ಸಾಹ ಮೂಡಿಸಿದೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಕೋಶಾಧಿಕಾರಿ ಕೆ.ತಿಮ್ಮಪ್ಪ ಉಪಸ್ಥಿತರಿದ್ದರು.

ಕ್ರೀಡಾಕೂಟದ ವಿಜೇತರ ವಿವರ: ಕೇರಂ ಸಿಂಗಲ್ಸ್‌ನಲ್ಲಿ ಕೋಚನ ಚೇತನ್(ಪ್ರ), ಬಿ.ಎಸ್.ದಿನೇಶ್(ದ್ವಿ), ಹರೀಶ್ ಕುಮಾರ್ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಡಬಲ್ಸ್‌ನಲ್ಲಿ ಕೋಚನ ಚೇತನ್- ಬಿ.ಎಸ್.ದಿನೇಶ್(ಪ್ರ), ಉಜ್ವಲ್ ರಂಜಿತ್- ಪಿ.ವಿ.ಪ್ರಭಾಕರ್ ತಂಡ(ದ್ವಿ), ಕುಡೆಕಲ್ ಸಂತೋಷ್ ಮತ್ತು ಅಶೋಕ್ ತೃತೀಯ ಸ್ಥಾನ ಗಳಿಸಿದರು. ಟೇಬಲ್ ಟೆನ್ನಿಸ್ ಸಿಂಗಲ್ಸ್‌ನಲ್ಲಿ ಜಿ.ವಿ.ರವಿ ಕುಮಾರ್ (ಪ್ರ), ಬಿ.ಪಿ.ರಾಜೇಶ್(ದ್ವಿ) ಮತ್ತು ಕೌಸರ್ ತೃತೀಯ ಸ್ಥಾನ ಪಡೆದುಕೊಂಡರೆ ಡಬಲ್ಸ್‌ನಲ್ಲಿ ಜಿ.ವಿ.ರವಿಕುಮಾರ್-ಕೌಸರ್ ತಂಡ(ಪ್ರ), ಟಿ.ಪಿ.ರಮೇಶ್-ಬಿ.ಪಿ.ರಾಜೇಶ್ ತಂಡ(ದ್ವಿ), ಟಿ.ಕೆ. ಸಂತೋಷ್ ಮತ್ತು ಮೋಹನ್ ರಾಜ್ ತೃತೀಯ ಬಹುಮಾನವನ್ನು ಪಡೆದುಕೊಂಡರು.


ಚೆಸ್ ಪಂದ್ಯಾವಳಿಯಲ್ಲಿ ಡಿ.ಪಿ.ಲೋಕೇಶ್(ಪ್ರ), ವಿನೋದ್ ಮೂಡಗದ್ದೆ(ದ್ವಿ) ಮತ್ತು ರಂಜಿತ್ ಕವಲಪಾರ ತೃತೀಯ ಸ್ಥಾನ ಪಡೆದುಕೊಂಡರು. ಮಕ್ಕಳ ವಿಭಾಗದ ಚೆಸ್‌ನಲ್ಲಿ ಮೌಲ್ಯ ಬಜೆಕೋಡಿ, ಅಹಾನ್, ಮೋಕ್ಷದಾಯಿ ಮತ್ತು ವಿಶ್ವಾಸ್ ವೆಂಕಟ್ ಸ್ಪರ್ಧಿಸಿ ಉತ್ತಮ ಆಟದ ಪ್ರದರ್ಶನ ನೀಡಿದರೆ, ನಿಹಾಲ್ ಕೇರಂ ಸ್ಪರ್ಧೆಯಲ್ಲಿ ಆಟವಾಡಿ ಗಮನ ಸೆಳೆದರು.


ಕೊಡಗು ಪತ್ರಿಕಾ ಭವನದ ವಾರ್ಷಿಕೋತ್ಸವದ ನ೫ ರ ಸಮಾರಂಭದಲ್ಲಿ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೂ ಪ್ರಶಂಸಾ ಪತ್ರವನ್ನು ನೀಡಲಾಗುತ್ತದೆ ಎಂದು ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net