

ಕೊಳ್ಳೇಗಾಲ: ದೈಹಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅವಶ್ಯಕ. ಹೀಗಾಗಿ ಓದಿನಷ್ಟೇ ಕ್ರೀಡೆಗೂ ಪ್ರಾಮುಖ್ಯತೆ ನೀಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಮಹದೇಶ್ವರ ಕಾಲೇಜು ಮೈದಾನದಲ್ಲಿ ಶನಿವಾರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಎಂ.ಜಿ.ಎಸ್.ವಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಮಾತನಾಡಿದರು.
ಓದು ಎಷ್ಟು ಮುಖ್ಯವೋ ಕ್ರೀಡೆಯೂ ಅಷ್ಟೆ ಮುಖ್ಯ. ಪ್ರಸ್ತುತ ಏಷ್ಯನ್ ಮಟ್ಟದ ಕ್ರೀಡೆ ನಡೆಯುತ್ತಿದೆ. ದೇಶದಿಂದ ಸ್ಪರ್ಧಿಸುವ ನಮ್ಮ ಕ್ರೀಡಾಪಟುಗಳು ಏಷ್ಯನ್ ಖಂಡದಲ್ಲೇ ದೇಶದ ಹಿರಿಮೆ ಹೆಚ್ಚಿಸುತ್ತಾ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಏಷ್ಯನ್‌ನಲ್ಲೇ ಭಾರತ ನಾಲ್ಕನೇ ಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಸ್.ಜಯಣ್ಣ ತಮ್ಮ ಅವಧಿಯಲ್ಲಿ ಮಹದೇಶ್ವರ ಕಾಲೇಜಿನ ಕ್ರೀಡಾಂಗಣ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಕೊಡಿಸಿದ್ದರು. ಅಂತೆಯೇ, ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಗೆ ಮೂರೂವರೇ ಕೋಟಿ ರೂ. ನಗರಸಭೆಯಿಂದ ನೀಡಲಾಗಿದೆ. ಆದರೂ ಅಭಿವೃದ್ಧಿ ಕಾಮಗಾರಿ ಅಪೂರ್ಣವಾಗಿದೆ. ನನ್ನ ಅವಧಿಯಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿವಹಿಸಬೇಕು. ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ಸುಪ್ತ ಪ್ರತಿಭೆಗಳು ಹೊರ ಬರುತ್ತದೆ. ರಾಜ್ಯ ಹಾಗೂ ರಾಷ್ಟ ಮಟ್ಟಕ್ಕೆ ಸ್ಪರ್ಧಿಸುವ ಅವಕಾಶ ಸಿಗುತ್ತದೆ. ಪ್ರಸ್ತುತ ಏಷ್ಯನ್ ಕ್ರೀಡೆಯಲ್ಲಿ ಭಾರತ ದಾಪುಗಾಲಿಡುತ್ತಿದೆ. 34 ಪದಕಗಳನ್ನು ಪಡೆದುಕೊಂಡಿದೆ. ಚೀನಾ ಹಾಗೂ ಜಪಾನ್ ದೇಶವನ್ನು ಭಾರತದ ಕ್ರೀಡಾಪಟುಗಳು ಹಿಮ್ಮೆಟ್ಟಿಸಿದ್ದಾರೆ ಎಂದರು.
ಡಿಡಿಪಿಐ ಮಂಜುನಾಥ್ ಪ್ರಸನ್ನ, ಬಿಇಒ ಮಂಜುಳಾ, ಎಂಜಿಎಸ್‌ವಿ ಕಾಲೇಜು ಪ್ರಾಂಶುಪಾಲ ಪ್ರಮೋದ್, ಎಂಜಿಎಸ್‌ವಿ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿ.ತೋಟೇಶ್, ದೈಹಿಕ ಶಿಕ್ಷಣ ಪರಿವೀಕ್ಷ ಸ್ಟೀವನ್, ನಗರಸಭೆ ಸದಸ್ಯರು ಇತರರು ಇದ್ದರು.