

ಶಿರಹಟ್ಟಿ: ವಿದ್ಯಾರ್ಥಿ ಜೀವನದಲ್ಲಿ ಪಠ್ಯಕ್ಕೆ ನೀಡಿದಷ್ಟು ಪ್ರಾಮುಖ್ಯತೆ ಪಠ್ಯೇತರ ಚಟುವಟಿಕೆಗೆ ನೀಡಬೇಕು. ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಹೇಳಿದರು.
ಬನ್ನಿಕೊಪ್ಪ ಗ್ರಾಮದ ಜ. ಅನ್ನದಾನೀಶ್ವರ ಸಂಯುಕ್ತ ಪಪೂ ಕಾಲೇಜು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಶಿರಹಟ್ಟಿ ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾನ್ನಿದ್ಯ ವಹಿಸಿದ್ದ ಮುಂಡರಗಿಯ ಜ.ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಕ್ರೀಡೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ಉಲ್ಲಸಿತರಾಗಿರಲು ಸಾಧ್ಯ. ಅದಕ್ಕಾಗಿ ಯಾವುದೇ ದುರಾಭ್ಯಾಸಕ್ಕೆ
ಅಂಟಿಕೊಳ್ಳದೇ ಉತ್ತಮ ಆರೋಗ್ಯ ಕಾಪಾಡಿಕೊಂಡು, ಸಂಸ್ಕಾರಯುತ ಶಿಕ್ಷಣ ಪಡೆದು ವಿದ್ಯಾರ್ಥಿ ಜೀವನದ ಸದುಪಯೋಗ ಪಡೆದಾಗ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಚಂದ್ರು ಲಮಾಣಿ, ಕ್ರೀಡಾಕೂಟದಲ್ಲಿ ಸೋಲು, ಗೆಲುವು ಸಾಮಾನ್ಯ. ಹೀಗಾಗಿ ಸ್ಪರ್ಧಾಳುಗಳು ಕ್ರೀಡಾ ಮನೋಭಾವದಿಂದ ಆಟವಾಡಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು. ಬಹುತೇಕ ಗ್ರಾಮಾಂತರ ಮಟ್ಟದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತೇಜನ, ಮಾರ್ಗದರ್ಶನ ನೀಡಿದ್ದಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ದೇಶದ ಕೀರ್ತಿ ಬೆಳಗಬಲ್ಲರು ಎಂದರು.
ಡಾ. ಸುಜ್ಞಾನದೇವ ಶಿವಾಚಾರ್ಯರು ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶೋಭಾ ಹಾಂಶಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಮಹಾವೀರ ಮಂಟಗಣಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜ್ ಶಿಕ್ಷಣ ಜಿಲ್ಲಾ ಉಪನಿರ್ದೇಶಕ ಜಿ.ಎನ್. ಕುರ್ತಕೋಟಿ, ಗ್ರಾಪಂ ಉಪಾಧ್ಯಕ್ಷೆ ಗಂಗವ್ವ ಆಡಿನ, ಆರ್.ಆರ್. ಗಡ್ಡದೇವರಮಠ, ಬಾಬಣ್ಣ ಕಲಾಲ, ಫಕ್ಕಣ್ಣ ಕುಸ್ತಿ, ಶಿವಪ್ಪ ಸಜ್ಜನರ, ಎಂ.ಕೆ. ಲಮಾಣಿ, ಗ್ರಾಪಂ ಸದಸ್ಯರು ಇತರರಿದ್ದರು. ಪ್ರಾಚಾರ್ಯ ಬಿ.ಎಂ. ಈಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಸಿ. ಹಿರೇಮಠ, ಎಸ್.ಎಸ್. ಮಠದ ನಿರ್ವಹಿಸಿದರು.