ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಸಹಕಾರಿ, ಮಂಗಳೂರು ವಿವಿ ಮಹಿಳಾ ಅಂತರ್-ಕಾಲೇಜು ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮೇಯರ್ ಮನೋಜ್ ಕುಮಾರ್

mng-nov8-kabadi
ಮಂಗಳೂರು ವಿಶ್ವವಿದ್ಯಾಲದ ದೈಹಿಕ ಶಿಕ್ಷಣ ವಿಭಾಗ, ಬೆಸೆಂಟ್ ಮಹಿಳಾ ಕಾಲೇಜು ಸಹಯೋಗದಲ್ಲಿ ಬೆಸೆಂಟ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಎರಡು ದಿನದ ಮಹಿಳಾ ಅಂತರ್-ಕಾಲೇಜು ಕಬಡ್ಡಿ ಪಂದ್ಯಾಟ ಉದ್ಘಾಟನೆಗೊಂಡಿದೆ.
Published on

ಮಂಗಳೂರು: ಕ್ರೀಡಾಕೂಟವು ಗುರಿಯನ್ನು ನಿಶ್ಚಯ ಮಾಡುವ ಪಾಠ. ಕ್ರೀಡೆಯು ಆತ್ಮವಿಶ್ವಾಸ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಸಹಕಾರಿ ಆಗಿದ್ದು, ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯ ಮೂಲವಾಗಿದೆ. ಕ್ರೀಡೆಯಿಂದ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುವುದು ಮಾತ್ರವಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಯು ಪ್ರಮುಖ ಸಹಕಾರಿ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಹೇಳಿದರು.

ಮಂಗಳೂರು ವಿಶ್ವವಿದ್ಯಾಲದ ದೈಹಿಕ ಶಿಕ್ಷಣ ವಿಭಾಗ, ಬೆಸೆಂಟ್ ಮಹಿಳಾ ಕಾಲೇಜು ಸಹಯೋಗದಲ್ಲಿ ಬೆಸೆಂಟ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಎರಡು ದಿನದ ಮಹಿಳಾ ಅಂತರ್-ಕಾಲೇಜು ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ದೇಶದ ಮಣ್ಣಿನ ಆಟ ಕಬಡ್ಡಿ, ಆಟದಲ್ಲಿ ಸೋಲು ಗೆಲುವು ಎರಡನ್ನು ಸಮವಾಗಿ ಸ್ವೀಕರಿಸುವುದು ಉತ್ತಮ. ಕ್ರೀಡೆಗಳು ಮನಸ್ಸಿಗೆ ಮುದ ನೀಡುವಂತೆ ದೈಹಿಕ ಪೋಷಣೆಗಳಿಗೂ ಸಹಾಯಕವಾಗುತ್ತವೆ. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ, ಶಿಸ್ತು, ಸಹಬಾಳ್ವೆಗಳಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಬಂಧಗಳ ವೃದ್ಧಿಗಳಿಗೂ ಕ್ರೀಡೆಗಳು ಅಗತ್ಯವಾಗಿವೆ. ಮನುಷ್ಯ ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಆತ್ಮವಿಶ್ವಾಸದೊಂದಿಗೆ ದಿಟ್ಟ ಹೆಜ್ಜೆಗಳನ್ನು ಇರಿಸಬೇಕು. ಆಲೋಚನೆಗಳು, ನಿರ್ಧಾರಗಳು ಅಚಲವಾಗಿದ್ದಾಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ ಎಂದರು.

ಮಂಗಳೂರಿನ ಯುವ ಶಕ್ತಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಮಾತನಾಡಿ, ಸರಕಾರದಿಂದ ಕ್ರೀಡೆಗೆ ಸಿಗುತ್ತಿರುವ ಪ್ರೋತ್ಸಾಹ ಅಪಾರ ಇದರ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವುದು ಅಗತ್ಯ. ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಗಳು ಸ್ಪರ್ಧಾ ಮನೋಭಾವವನ್ನು ಮೂಡಿಸಲು ಸಹಾಯ ಮಾಡುತ್ತದೆ. ಕ್ರೀಡಾಪಟುಗಳಿಗೆ ದೇಶ ವಿದೇಶ ಮಟ್ಟದಲ್ಲಿ ವಿಶೇಷ ಮನ್ನಣೆಯಿದೆ. ರಾಷ್ಟ್ರೀಯ ಸಂಬಂಧಗಳ ವೃದ್ಧಿಗೆ ಕ್ರೀಡೆಗಳ ಕೊಡುಗೆ ಅಪಾರವಾಗಿದೆ. ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ ಎಂದರು.

ಬೆಸಂಟ್ ಮಹಿಳಾ ಕಾಲೇಜಿನ ಉಪಾಧ್ಯಕ್ಷೆ ಡಾ.ಮಂಜುಳಾ ಕೆ.ಟಿ ಅಧ್ಯಕ್ಷತೆ ವಹಿಸಿದ್ದರು.

ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಮಾಜಿ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಬಿ., ಬೆಸಂಟ್ ಮಹಿಳಾ ಕಾಲೇಜಿನ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ರಾಜಶೇಖರ್ ಹೆಬ್ಬಾರ್, ಡಬ್ಲುೃ ಎನ್‌ಇಎಸ್‌ನ ಅಧ್ಯಕ್ಷರಾದ ಮಣೇಲ್ ಅಣ್ಣಪ್ಪ ನಾಯಕ್, ಐಕ್ಯೂಸ್ ಸಂಯೋಜಕ ಡಾ. ಸತೀಶ ಕೆ, ಡಬ್ಲುೃ ಎನ್‌ಇಎಸ್‌ನ ಕಾರ್ಯದರ್ಶಿ ಸುರೇಶ್ ಪೈ, ಕಾಲೇಜು ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ ಸಿ, ದೈಹಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಗೇರಾಲ್ಡ್ ಸಂತೋಷ್ ಡಿಸೋಜಾ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಿ ರೂಪತಿ ಎಮ್, ಸದಸ್ಯರಾದ ಡಾ. ಲೋಕರಾಜ್ ವಿ.ಎಸ್ ಮತ್ತು ಕ್ರೀಡಾ ಕಾರ್ಯದರ್ಶಿ ರಚನಾ ಕೋಟ್ಯಾನ್ ಉಪಸ್ಥಿತರಿದ್ದರು.

---------------

ಕ್ರೀಡಾತ್ಮಕ ಮನೋಭಾವವನ್ನು ಬೆಳೆಸಲು ಶಾರೀರಿಕ ಮತ್ತು ಮಾನಸಿಕ ದೃಡತೆ ಅಗತ್ಯ. ಮನುಷ್ಯ ಪರಿಪೂರ್ಣನಾಗಬೇಕಾದರೆ ಕಬಡ್ಡಿ ಪಂದ್ಯಾಟದಂತಹ ಪರಿಶ್ರಮವನ್ನು ಬಯಸುವ ಆಟಗಳಿಂದ ಪಡೆಯುವುದು ಸಾಧ್ಯ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡಿದ್ದಲ್ಲಿ ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಬಹುದು.

-ಡಾ.ಮಂಜುಳಾ ಕೆ.ಟಿ, ಬೆಸಂಟ್ ಮಹಿಳಾ ಕಾಲೇಜಿನ ಉಪಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net