ಮನೋದೈಹಿಕ ಸಮತೋಲನಕ್ಕೆ ಕ್ರೀಡೆ ಸಹಕಾರಿ: ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್

11
Published on

ಮೈಸೂರು: ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರಿಗೆ ಮಾನಸಿಕ, ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆ ಸಹಕಾರಿಯಾಗಲಿದೆ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಿನಿ ಹಾಕಿ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಕರ್ತರ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸದಾ ಬ್ರೇಕಿಂಗ್ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ಮಾನಸಿಕವಾಗಿ ಮತ್ತು ದೈಹಿಕವಾಗಿ ಅತ್ಯಂತ ಚಟುವಟಿಕೆಯಿಂದಿರಲು ಕ್ರೀಡೆ ಸಹಕಾರಿ ಎಂದರು.

ಪತ್ರಕರ್ತರು ವೃತ್ತಿನೀವನದ ಕೊನೇ ವರೆಗೂ ಕೆಲಸದ ಒತ್ತಡ ಇರುತ್ತದೆ. ದೀರ್ಘ ಕಾಲ ಕರ್ತವ್ಯ ನಿರ್ವಹಿಸಬೇಕಾದರೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲ ಪತ್ರಕರ್ತರು ಒಂದೆಡೆ ಸೇರಿ ಕ್ರೀಡಾಸ್ಫೂರ್ತಿ ಮೆರೆದಿರುವುದು ಪ್ರಶಂಸನೀಯ. ಆಗಾಗ್ಗೆ ಈ ರೀತಿಯ ಕ್ರೀಡಾಕೂಟ ಸಂಘಟಿಸುವಂತೆ ಸಲಹೆ ನೀಡಿದರು.

ಎಕ್ಸ್‌ಪ್ರೆಸ್ ಟ್ರೋಫಿ ಪ್ರಯೋಜಕತ್ವ: ಹಿರಿಯ ಪತ್ರಕರ್ತ ಶಿವಕುಮಾರ್ ಮಾತನಾಡಿ, ಮುಂಬರುವ ದಿನಗಳಲ್ಲಿ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಕಪ್, ಸರಣಿ ಶ್ರೇಷ್ಠ ಪ್ರಶಸ್ತಿ ನೀಡುವುದಾಗಿ ಘೋಷಿಸಿದರು.

ಪತ್ರಕರ್ತರು ಒಂದೆಡೆ ಕಲೆಯುವುದೇ ಅಪರೂಪ. ಇಂತಹ ಕ್ರೀಡಾಕೂಟದ ಮೂಲಕ ಒಂದೆಡೆ ಕಲೆತಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದು ಆಶಿಸಿದ ಅವರು, ವಿಜೇತ ತಂಡಕ್ಕೆ ವೈಯಕ್ತಿಕವಾಗಿ 3 ಸಾವಿರ ರೂ. ನಗದು ನೀಡಿದರು.

ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಹಿರಿಯ ಪತ್ರಕರ್ತರಾದ ಕೂಡ್ಲಿ ಗುರುರಾಜ್, ಸಿ.ಕೆ.ಮಹೇಂದ್ರ, ಪ್ರಭುರಾಜನ್, ಕುಂದೂರು ಉಮೇಶ್‌ಭಟ್, ಕೆ.ನರಸಿಂಹಮೂರ್ತಿ, ಎಸ್.ಟಿ.ರವಿಕುಮಾರ್, ರಮೇಶ್ ಉತ್ತಪ್ಪ, ಎಂ.ಸುಬ್ರಹ್ಮಣ್ಯ, ಕೆ.ಪಿ.ನಾಗರಾಜ್, ರಾಮು, ಕೊಳ್ಳೇಗಾಲ ಮಹೇಶ್, ದಿನೇಶ್‌ಕುಮಾರ್, ಧರ್ಮಾಪುರ ನಾರಾಯಣ, ಕಿರಣ್‌ಕುಮಾರ್, ವಿನೋದ್, ಸತೀಶ್ ಇತರರು ಇದ್ದರು.

ಪ್ರಶಸ್ತಿ ಪುರಸ್ಕೃತರಿಗೆ ಗೌರವ

ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೊಮ್ಮಟ ದತ್ತಿ ಪ್ರಶಸ್ತಿ ಪುರಸ್ಕೃತ ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ರಾಮಯ್ಯ ದತ್ತಿ ಪ್ರಶಸ್ತಿ ಪುರಸ್ಕೃತ ಮೈಸೂರು ಮಿತ್ರ ಪತ್ರಿಕೆ ಮುಖ್ಯ ವರದಿಗಾರ ಎಸ್.ಟಿ.ರವಿಕುಮಾರ್ ಅವರನ್ನು ಗೌರವಿಸಲಾಯಿತು. ಅಲ್ಲದೆ ಅಕಾಲಿಕ ನಿಧನರಾದ ಮೈಸೂರು ಮಿತ್ರ ಪತ್ರಿಕೆಯ ಉದ್ಯೋಗಿ ಗೋವಿಂದರಾಜು ಅವರ ನಿಧನಕ್ಕೆ ಸಂತಾಪ ಸೂಚಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net