

ನಾಪೋಕ್ಲು: ಗ್ರಾಮೀಣ ಮಟ್ಟದಲ್ಲಿ ಹಲವು ಪ್ರತಿಭೆಗಳಿದ್ದು, ಇವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಹ ಸ್ಪರ್ಧಿಗಳನ್ನಾಗಿ ತಯಾರು ಮಾಡುವ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ಪಟ್ಟಣದ ಹಿಂದು ಮಲಯಾಳಿ ಸಂಘದ ವತಿಯಿಂದ ಭಾನುವಾರ ಸಮೀಪದ ಹಳೇ ತಾಲೂಕಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದೆ. ಎಲ್ಲ ಸಮಾಜ, ಸಮುದಾಯದವರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ. ದೇಶಕ್ಕೆ ದೊಡ್ಡ ದೊಡುಗೆ ಜಿಲ್ಲೆಯ ಕ್ರೀಡಾಪಟುಗಳು ನೀಡಿದ್ದಾರೆ. ಮತ್ತಷ್ಟು ಕ್ರೀಡಾ ಪ್ರತಿಭೆಗಳನ್ನು ಹೊರ ತರುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾದದ್ದು ಎಂದರು.
ಗ್ರಾಮೀಣ ನಿವಾಸಿಗಳು ಶತಮಾನಗಳಿಂದ ಹಗ್ಗಜಗ್ಗಾಟದಂತಹ ಹಲವು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ. ಇಂತಹ ಕ್ರೀಡೆಗಳು ಗ್ರಾಮೀಣ ಸೊಬಗನ್ನು ಎತ್ತಿ ಹಿಡಿಯುವುದರೊಂದಿಗೆ ಜನರಲ್ಲಿ ಒಗ್ಗಟ್ಟು ಮೂಡಿಸಿ ಸಾಮರಸ್ಯ ಮೂಡಿಸಲು ಸಹಕಾರಿಯಾಗಿದೆ. ಬಹುತೇಕ ಕೃಷಿಕರೇ ಇರುವ ಗ್ರಾಮೀಣ ಜನತೆಗೆ ಇಂತಹ ಕ್ರೀಡಾಕೂಟಗಳು ಮನೋರಂಜನೆ ಹಾಗೂ ಮನೋಸ್ಥೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಹಿಂದು ಮಲಯಾಳಿ ಸಂಘ ಹಾಗೂ ಹಿಂದು ಮಲಿಯಾಳಿ ಸಮುದಾಯದವರು ಕೊಡಗಿನ ಅಭಿವೃದ್ಧಿಗೆ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಅವರ ಕಾರ್ಯಕ್ಷಮತೆ, ಬದ್ಧತೆ ಎಲ್ಲರಿಗೂ ಮಾದರಿಯಾಗಿದೆ. ಈ ಹಿನ್ನೆಲೆಯಲ್ಲಿ ಹಿಂದು ಲಯಾಳಿಗಳ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಕೆ.ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬ ಮಾತನಾಡಿದರು. ನಾಪೋಕ್ಲು ಹಿಂದು ಮಲಯಾಳಿ ಸಂಘದ ಅಧ್ಯಕ್ಷ ಕೆ.ಕೆ.ಅನಿಲ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಶ್ರೀ ಪೊನ್ನು ಮುತ್ತಪ್ಪ ದೇಗುಲದ ಅಧ್ಯಕ್ಷ ಎ.ಕೆ. ಚಂದ್ರ, ಕಾಫಿ ಬೆಳೆಗಾರರಾದ ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ಚೀಯಕಪೂವಂಡ ಎಸ್.ಮಂಜುನಾಥ್ (ಕಟ್ಟಿ), ಗ್ರಾಪಂ ಸದಸ್ಯರಾದ ಮಾಚೇಟಿರ ಕುಸು ಕುಶಾಲಪ್ಪ, ಹೇಮಾ ಅರುಣ್, ಬಿ.ಎಂ.ಪ್ರತೀಪ, ಕಲಿಯಂಡ ಸಂಪನ್ ಅಯ್ಯಪ್ಪ , ಹಿಂದು ಮಲಯಾಳಿ ಸಂಘದ ಸಲಹೆಗಾರ ರಘು ಅಜಿಮುಟ್ಟ ಇತರರು ಇದ್ದರು.
ಇದಕ್ಕೂ ಮೊದಲು ಕೇರಳದ ಚೆಂಡ ಮೇಳ ಹಾಗೂ ಸಾಂಪ್ರದಾಯಿಕ ಉಡುಗೆ-ತೊಡುಗೆಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಆ ಬಳಿಕ ಶ್ರೀ ಈಶ್ವರ ಇ ಗ್ಗುತ್ತಪ್ಪ, ಎ ಮತ್ತು ಬಿ ತಂಡಗಳ ಹಗ್ಗ ಜಗ್ಗಾಟ ಸ್ಪರ್ಧೆಗೆ ಚಾಲನೆ ನೀಡಲಾಯಿತು.