ಕ್ರೀಡೆ ಕೊಡವರಿಗೆ ರಕ್ತಗತವಾಗಿ ಬಂದಿದೆ

23vpt -02
ಕೊಡವ ಸಮಾಜಕ್ಕೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಭಾರದ ಗುಂಡು ಎಸೆತದಲ್ಲಿ ಪಾಲ್ಗೊಂಡಿರುವ ಮಹಿಳಾ ಆಟಗಾರರು.
Published on

ವಿರಾಜಪೇಟೆ: ವಿಶಿಷ್ಟ ಸಂಸ್ಕೃತಿಗಳನ್ನು ಹೊಂದಿರುವ ಕೊಡವ ಜನಾಂಗಕ್ಕೆ ಕ್ರೀಡೆ ರಕ್ತಗತವಾಗಿ ಬಂದಿದೆ ಎಂದು ಹಾಕಿ ಹಿರಿಯ ತರಬೇತುದಾರ ಮೇಕೆರಿರ ರವಿ ಪೆಮ್ಮಯ್ಯ ಅಭಿಪ್ರಾಯಪಟ್ಟರು.

ಕೊಡವ ಸಮಾಜದ ಶತಮಾನ ಸಂಭ್ರಮಾಚರಣೆ ಅಂಗವಾಗಿ ವಿರಾಜಪೇಟೆ ಕೊಡವ ಸಮಾಜದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕ್ರೀಡಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡವರು ವೀರ ಯೋಧರು. ಪೂರ್ವ ಇತಿಹಾಸದ ರಾಜರ ಆಳ್ವಿಕೆಯ ಕಾಲದಲ್ಲಿ ಪಡೆ ಕಟ್ಟಲು (ಸೈನ್ಯ ಕಟ್ಟಲು) ತ್ಯಾಗ, ಬಲಿದಾನದ ಮೂಲಕ ತಮ್ಮನ್ನು ಗುರುತಿಸಿಕೊಂಡವರು. ಯೋಧ ಪರಂಪರೆಯನ್ನು ಇಂದಿಗೂ ಜೀವಂತವಾಗಿರಿಸುವ ನಿಟ್ಟಿನಲ್ಲಿ ತೋಕ್ ನಮ್ಮೆ, ಶುಭ ಮತ್ತು ಅಶುಭ ಕಾರ್ಯಕ್ರಮದಲ್ಲಿ ಆಕಾಶಕ್ಕೆ ಗುಂಡು ಹಾರಿಸಲಾಗುತ್ತದೆ. ಹೀಗೆ ಹಲವು ಬಾರಿ ತಮ್ಮ ಗುರುತಿಸುವಿಕೆಯನ್ನು ಸ್ಪಷ್ಟಪಡಿಸುತ್ತಾರೆ ಎಂದರು.

ಕ್ರೀಡೆ ಎಂಬುದು ಕೊಡವರ ಅವಿಭಾಜ್ಯ ಅಂಗವಾಗಿದೆ. ಹಾಕಿ ಕ್ರೀಡೆಗೆ ಮಹತ್ವ ನೀಡಲಾಗುತ್ತಿದೆ. ಈ ಹಿಂದೆ ಕೊಡವರು ಹಾಕಿ ಮತ್ತು ಅಥ್ಲೆಟಿಕ್ಸ್‌ನಲ್ಲಿ ಮಾತ್ರ ಭಾಗವಹಿಸುತ್ತಿದ್ದರು. ಪ್ರಸ್ತುತ ಎಲ್ಲ ಕ್ರೀಡೆಯಲ್ಲೂ ಕೊಡವರು ಪದಾರ್ಪಣೆ ಮಾಡಿದ್ದು, ಗಣನೀಯ ಸಾಧನೆ ಮಾಡಿರುವುದು ಕೊಡವರ ಹೆಗ್ಗರುತು ಎಂದರು.
ಕೊಡವ ಸಮಾಜದ ಅಧ್ಯಕ್ಷ ಕುಂಭೇರ ಮನುಕುಮಾರ್ ಮಾತನಾಡಿ, ಕೊಡವ ಸಮಾಜವು ಇಂದು ಶತಮಾನೋತ್ಸವದ ಹೊಸ್ತಿಲಲ್ಲಿದೆ. ಕೊಡವ ಜನಾಂಗದವರು ಇದನ್ನು ಹಬ್ಬದ ರೂಪದಲ್ಲಿ ಆಚರಿಸುವ ನಿಟ್ಟಿನಲ್ಲಿ ಎರಡು ದಿನಗಳು ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಕೊಡವ ಸಮಾಜ ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ಪಿ.ಸುಬ್ರಮಣಿ ಅವರು ವಿವಿಧ ಕ್ರೀಡಾ ಸ್ಪರ್ಧೆಗಳ ಮಾಹಿತಿ ನೀಡಿದರು. ಸಮಾಜದ ಉಪಾಧ್ಯಕ್ಷ ಕುಯ್ಯಮಂಡ ಕಿರಣ್, ಮಾದೇಯಂಡ ಸಂಪಿ ಪೂಣಚ್ಚ ಹಾಗೂ ಗೌರವ ಕಾರ್ಯದರ್ಶಿ ಮಾಳೇಟಿರ ಎ. ಶ್ರೀನಿವಾಸ್ ಸಮಾಜದ ನಿರ್ದೇಶಕರು ಹಾಜರಿದ್ದರು.

ವಿವಿಧ ಸ್ಪರ್ಧೆಗಳು: ಕೊಡವ ಜನಾಂಗದ ಪುರುಷರು ಹಾಗೂ ಮಹಿಳೆಯರಿಗಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಹಗ್ಗ ಜಗ್ಗಾಟ, ಭಾರಗುಂಡು ಎಸೆತ, ಕೊಡವ ಓಲಗತಾಟ್ ಸ್ಪರ್ಧೆಗಳಲ್ಲಿ ಪೈಪೋಟಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net