

ಚನ್ನರಾಯಪಟ್ಟಣ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಿಸ್ತು ಮತ್ತು ಸಂಯಮ ವೃದ್ಧಿಯಾಗುತ್ತದೆ ಎಂದು ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಜ್ಞಾನಸಾಗರ ಅಂತಾರಾಷ್ಟ್ರೀಯ ವಿದ್ಯಾಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿಬಿಎಸ್‌ಇ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿನ ಕಠಿಣ ನಿಯಮಗಳನ್ನು ಅನುಸರಿಸುವುದು, ತಂಡದ ಸದಸ್ಯರೊಂದಿಗೆ ಸಹಕರಿಸುವುದು, ಸೋಲನ್ನು ಸಮನಾಗಿ ಸ್ವೀಕರಿಸುವುದು ಮತ್ತು ತಮ್ಮ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು ನಿರಂತರವಾಗಿ ಶ್ರಮಿಸುವುದನ್ನು ಕಲಿಸುತ್ತವೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ, ಸ್ಥಿತಿಸ್ಥಾಪಕತ್ವ ಮತ್ತು ಸಮಸಮನ್ವಯದಂತಹ ಜೀವನ ಕೌಶಲಗಳನ್ನು ಬೆಳೆಸುತ್ತದೆ. ಶಿಕ್ಷಣವು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾದರೆ, ಕ್ರೀಡೆಗಳು ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮನಸ್ಸಿಗೆ ಉಲ್ಲಾಸ ನೀಡಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದಕ್ಕೆ ಪಾಲಕರು ಬೆಂಬಲ ನೀಡಬೇಕು. ಆಗ ಮಾತ್ರ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಪ್ರಸ್ತುತ ದೇಶದಲ್ಲಿ ಶೇ.60 ರಷ್ಟು ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಜೀವನ ಕ್ರಮವೇ ಕಾರಣ. ಆದ್ದರಿಂದ ಒತ್ತಡದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು. ಶಿಕ್ಷಣ ಸಂಸ್ಥೆ ಪಠ್ಯಕ್ಕೆ ಎಷ್ಟು ಮೌಲ್ಯ ನೀಡುತ್ತದೆಯೋ ಅಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್ ಕ್ರೀಡಾಪಟು ವಿ.ಆರ್.ಸನೋಜ್ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ, ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ. ಕ್ರೀಡೆ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಒದಗಿಸುವ ಏಕಮಾತ್ರ ಮಾರ್ಗವಾಗಿದೆ. ಅಲ್ಲದೆ ಕ್ರೀಡಾ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದರ ಜತೆಗೆ ಆರೋಗ್ಯವನ್ನೂ ವೃದ್ಧಿಸುತ್ತದೆ. ಜತೆಗೆ ಮಕ್ಕಳು ಉತ್ತಮ ನಡೆ ಹಾಗೂ ಗುಣಗಳನ್ನು ರೂಢಿಸಿಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಪಥಸಂಚಲನ ಮಾಡುವ ಮೂಲಕ ಪಂದ್ಯಾವಳಿಗೆ ಮೆರುಗು ತಂದುಕೊಟ್ಟರು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್ ಕ್ರೀಡಾಪಟು ಪೃಥ್ವಿರಾಜ್, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಡಾ.ಭಾರತಿ ನಾಗೇಶ್, ಸಂಸ್ಥೆಯ ಡೀನ್ ಸುಜಾ ಫಿಲಿಪ್ಸ್, ಆಡಳಿತಾಧಿಕಾರಿ ಫಿಲಿಪ್ ಇತರರು ಇದ್ದರು.
ವಿಜೇತರ ವಿವರ
ಜಿಲ್ಲೆಯ 13 ಸಿಬಿಎಸ್‌ಇ ಶಾಲೆಯ ಮಕ್ಕಳು ವಾಲಿಬಾಲ್ ಪದ್ಯಾವಳಿಯಲ್ಲಿ ಭಾಗವಹಿಸಿದ್ದರು. ಜ್ಷಾನಸಾಗರ ಅಂತಾರಾಷ್ಟ್ರೀಯ ಶಾಲೆ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಗಳಿಸಿ ಟ್ರೋಫಿ ಪಡೆಯಿತು. ಹಾಸನದ ಸಿಕೆಎಸ್ ಶಾಲೆ ದ್ವಿತೀಯ ಸ್ಥಾನ ಸ್ಥಾನ ಪಡೆಯಿತು.