ನಿರ್ಭೀತ ಪತ್ರಿಕೋದ್ಯಮ ಇಂದಿನ ಅಗತ್ಯ

udp-22-sports 1
Published on

ಉಡುಪಿ: ನಿರ್ಭೀತ ಪತ್ರಿಕೋದ್ಯಮ ಇಂದಿನ ಅವಶ್ಯಕತೆಯಾಗಿದ್ದು, ಪತ್ರಿಕೆಗಳು ಮತ್ತು ಪತ್ರಕರ್ತರು ಜನರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಹೇಳಿದರು.

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಜತ ಮಹೋತ್ಸವದ ಪ್ರಯುಕ್ತ ನಡೆದ ರಜತ ಕ್ರೀಡಾ ಸಂಭ್ರಮ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಇಂದಿನ ಕಾಲಟ್ಟದಲ್ಲಿ ಪತ್ರಿಕಾರಂಗ ಉದ್ಯಮವಾಗಿ ಬೆಳೆದು ನಿಂತಿದೆ. ಹೀಗಾಗಿ ಪತ್ರಕರ್ತರು ಸ್ಪರ್ಧಾತ್ಮಕ ನೆಲೆಯಲ್ಲಿ ಸುದ್ದಿಕೊಡುವ ಒತ್ತಡದಲ್ಲಿದ್ದಾರೆ. ಪತ್ರಿಕೆ ಅಚ್ಚುಕಟ್ಟಾಗಿ ಮುದ್ರಣಗೊಂಡು ಮುಂಜಾನೆ ಓದುಗರ ಕೈಸೇರುವಲ್ಲಿ ನೂರಾರು ಪತ್ರಕರ್ತರ ಪರಿಶ್ರಮವಿರುತ್ತದೆ ಎಂದರು. ರಾಜ್ಯದಲ್ಲಿ ಮೊದಲ ಪತ್ರಿಕೆ ಮಂಗಳೂರಿನಲ್ಲಿ ಪ್ರಾರಂಭವಾಗಿರುವುದರಿಂದ ಬೇರೆ ಜಿಲ್ಲೆಗೆ ಹೋಲಿಸಿದರೆ ಅವಿಭಜಿತ ದಕ ಜಿಲ್ಲೆಯಲ್ಲಿ ಕ್ರಿಯಾಶೀಲ ಪತ್ರಕರ್ತರ ಪರಂಪರೆಯೇ ಬೆಳೆದು ಬಂದಿದೆ. ಪತ್ರಿಕೆಗಳು ಆಧುನಿಕತೆಗೆ ತೆರೆದುಕೊಂಡಿವೆ ಎಂದು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್​ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ.ಅವಿನಾಶ್​ ಶೆಟ್ಟಿ , ನಗರಸಭೆ ಪೌರಾಯುಕ್ತ ರಾಯಪ್ಪ , ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್​ ಕುಮಾರ್​ ಶೆಟ್ಟಿ , ಜಿಲ್ಲಾ ಅಥ್ಲೆಟಿಕ್ಸ್​ ಅಸೋಸಿಯೇಶನ್​ ಅಧ್ಯಕ್ಷ ಹರಿಪ್ರಸಾದ್​ ರೈ , ಉದ್ಯಮಿ ಆನಂದ ಪಿ. ಸುವರ್ಣ ಉಪಸ್ಥಿತರಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್​ ಮಂಜನಬೈಲು, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್​ ಕುಮಾರ್​ ಶಿರೂರು, ಕೋಶಾಧಿಕಾರಿ ಉಮೇಶ್​ ಮಾರ್ಪಳ್ಳಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪತ್ರಕರ್ತ ದೀಪಕ್​ ಜೈನ್​ ನೇತೃತ್ವದಲ್ಲಿ ವಿವಿಧ ತಾಲೂಕು ಸಂಘಗಳ ಸದಸ್ಯರಿಂದ ಪಥ ಸಂಚಲನ ನಡೆಯಿತು. ಪತ್ರಕರ್ತ ರಾಜು ಖಾರ್ವಿ ನೇತೃತ್ವದಲ್ಲಿ ಪ್ರಜ್ವಲ್​ ಅಮೀನ್​ ಹಾಗೂ ಅನಿಲ್​ ಕೈರಂಗಳ ಕ್ರೀಡಾ ಜ್ಯೋತಿ ಬೆಳಗಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿ, ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಶರೀಫ್​ ಕಾರ್ಕಳ ಪ್ರಸ್ತಾವನೆಗೈದರು. ಪತ್ರಕರ್ತ ರಾಜೇಶ್​ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.

ಕ್ರೀಡಾಕೂಟದಲ್ಲಿ ಓಟ, ಉದ್ದ ಜಿಗಿತ, ರಿಲೇ, ಹಗ್ಗಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆ, ಸ್ಪೋ ಬೈಕ್​ ರೇಸ್​, ಈಜು ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 40ವರ್ಷ ಕೆಳಗಿನ, 40ವರ್ಷ ಮೇಲ್ಪಟ್ಟ ಹಾಗೂ 50 ವರ್ಷ ಮೇಲ್ಪಟ್ಟು ಮೂರು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net