

ಮಡಿಕೇರಿ: ಶಾಂತಿನಿಕೇತನ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ೪೫ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ವಿವಿಧ ಕ್ರೀಡಾ ಸ್ಪರ್ಧೆಗಳು ಇತ್ತೀಚೆಗೆ ನಡೆಯಿತು.
ಅಶ್ವಿನಿ ಗಣಪತಿ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿದ ಸಂಘದ ಸದಸ್ಯ ಹಾಗೂ ಮಾಜಿ ಕ್ರೀಡಾಪಟು ಪಿ.ಎ.ರವಿ ಪಂದ್ಯಾವಳಿಗೆ ಚಾಲನೆ ನೀಡಿದರು. ಶಾಂತಿನಿಕೇತನದಲ್ಲಿ ನಡೆದ ಕ್ರೀಡಾಕೂಟದ ಕಾರ್ಯಕ್ರಮವನ್ನು ವ್ಯಾಂಡಮ್ ಎಂಟರ್ ಪ್ರೈಸಸ್‌ನ ಮಾಲೀಕ ಕೆ.ಕೆ.ದಾಮೋದರ ಉದ್ಘಾಟಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪತ್ರಕರ್ತೆ ಸವಿತಾ ರೈ, ಶಾಂತಿನಿಕೇತನ ಯುವಕ ಸಂಘ ಅಂದು ಬಾಲ ಗಂಗಾಧರನಾಥ ತಿಲಕರ ಗಣೇಶೋತ್ಸವದ ಉದ್ದೇಶವನ್ನು ಇಂದಿಗೂ ಯಥಾವತ್ತಾಗಿ ಪಾಲಿಸಿಕೊಂಡು ಶ್ರದ್ಧಾಭಕ್ತಿಯಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಮಡಿಕೇರಿ ದಸರಾದ ೧೧ನೇ ಮಂಟಪ ಶಾಂತಿನಿಕೇತನ ಯುವಕ ಸಂಘದ ಗಣೇಶೋತ್ಸವ ಮಂಟಪ ಎನ್ನುವ ಹೆಗ್ಗಳಿಕೆ ಇದೆ. ಸಂಘದ ಅಧ್ಯಕ್ಷ ಚೇತನ್ ಹಾಗೂ ತಂಡದ ಶ್ರಮ ಇತರರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಗೌರವ ಸಲಹೆಗಾರ ಮನು ಮಂಜುನಾಥ್ ಮಾತನಾಡಿ, ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರ ಉಳಿದು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ನವರತ್ನ ಬೇಕರಿ ಮಾಲೀಕ ರಾಜು, ಕ್ರೀಡಾ ಸಮಿತಿಯ ಆಕಾಶ್ ತೇಜು ಹಾಗೂ ತಮ್ಮಿ ಉಪಸ್ಥಿತರಿದ್ದರು. ಯೋಗೇಶ್ ಕುಮಾರ್ ಸ್ವಾಗತಿಸಿ, ದಿವಾಕರ ರೈ ವಂದಿಸಿ, ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಕೂಟದ ವಿಜೇತರು: ಎಲ್.ಕೆ.ಜಿ. ಮತ್ತು ಯುಕೆಜಿ ಮಕ್ಕಳಿಗೆ ನಡೆದ ಕಾಳುಹೆಕ್ಕುವ ಸ್ಪರ್ಧೆಯಲ್ಲಿ ಎಸ್.ಪಿ.ಮೋನಿಶ್(ಪ್ರ), ಶೌರ್ಯ(ದ್ವಿ), ಎಸ್.ರುಚಿತಾ(ತೃ), ೧ ರಿಂದ ೩ನೇ ತರಗತಿ ಮಕ್ಕಳಿಗೆ ನಡೆದ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ಎಚ್.ಸಿ.ಪುನರ್ವಿ ಗೌಡ(ಪ್ರ), ಚಿರಂತ್ ಎನ್.ಗೌಡ(ದ್ವಿ), ಅನ್ಯ ಎಂಜಿಲಿನ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
೪ ರಿಂದ ೬ನೇ ತರಗತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಕೆ.ಎಸ್.ರಿಶಿತ್(ಪ್ರ), ಕೆ.ಸಿ.ಮೇಘನಾ(ದ್ವಿ), ಕೆ.ವಿ.ಪಂಚಮಿ ತೃತೀಯ ಬಹುಮಾನ. ಸಂಘದ ಸದಸ್ಯರಿಗೆ ನಡೆದ ಬೆಲೂನ್ ರಕ್ಷಣೆ ಸ್ಪರ್ಧೆಯಲ್ಲಿ ಜಗದೀಶ್ ಪ್ರಥಮ, ಭರತ್ ದ್ವಿತೀಯ, ವಿನು ತೃತೀಯ ಬಹುಮಾನ ಪಡೆದುಕೊಂಡರು.