

ವಿರಾಜಪೇಟೆ: ಕ್ರೀಡಾಕೂಟ ಆರಂಭಿಸುವುದು ಸುಲಭವಾದರೂ ಮುಂದುವರಿಸಿಕೊಂಡು ಹೋಗುವುದು ಕಷ್ಟ ಸಾಧ್ಯ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ವಿರಾಜಪೇಟೆ ಕೊಡವ ಸಂಘ ಒಕ್ಕೂಟದ ಆಶ್ರಯದಲ್ಲಿ ವಿರಾಜಪೇಟೆ ಕಾವೇರಿ ಕೊಡವ ಕೇರಿ ಸಂಘ 4ನೇ ವರ್ಷದ ಅಂತರ ಕೊಡವ ಕೇರಿ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಶನಿವಾರ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಕೊಡವ ಹಾಕಿ ಪಂದ್ಯಾವಳಿಯ ಜನಕ ಪಾಂಡಂಡ ಕುಟ್ಟಪ್ಪ ಅವರನ್ನು ಸ್ಮರಿಸಿ, ಅವರ ಕಲ್ಪನೆಗೂ ಮೀರಿ ಎರಡು ದಶಕಗಳಿಂದ ವೈಭವಯುತವಾಗಿ ಕೊಡವ ಕುಟುಂಬಗಳ ಮಧ್ಯೆ ಹಾಕಿ ಪಂದ್ಯಾವಳಿ ಇಂದಿಗೂ ನಡೆಯುತ್ತ ಬಂದಿದೆ. ಸಮುದಾಯ ಜನರ ಸಮಾಗಮಕ್ಕೆ ಕ್ರೀಡಾಕೂಟಗಳು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಕ್ರೀಡೆಗೂ ತನ್ನದೇ ಆದ ಗೌರವವಿದೆ. ನೀತಿ ನಿಯಮಗಳಿವೆ. ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದಲ್ಲಿ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ. ಕ್ರೀಡಾಕೂಟಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ, ಮುಂದುವರಿಸಿಕೊಂಡು ಸಾಗುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಕೊಡವ ಕೇರಿಗಳ ಸದಸ್ಯರು ಪಂದ್ಯಾಟಗಳ ಆಯೋಜನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಪಟ್ಟಡ ಪೂವಣ್ಣ ಮಾತನಾಡಿ, ಸಂಘಟನಾತ್ಮಕವಾಗಿ ಚಿಂತಿಸಿದಲ್ಲಿ ಹೊಸ ಆವಿಷ್ಕಾರಗಳು ಮೂಡಿಬರುತ್ತದೆ. ಈ ನಿಟ್ಟಿನಲ್ಲಿ ಕ್ರಿಯಾಶೀಲ ಯುವ ಮನಸುಗಳು ಪಂದ್ಯಾವಳಿಯನ್ನು ಆಯೋಜಿಸಿರುವುದು ಸಂತಸದಾಯಕ ಎಂದು ಹೇಳಿದರು.
ಕೊಡವ ಕೇರಿಗಳ ಒಕ್ಕೂಟದ ಅಧ್ಯಕ್ಷ ಮೇಕೆರಿರ ರವಿ ಪೆಮ್ಮಯ್ಯ ಮಾತನಾಡಿ, ಸತತ ನಾಲ್ಕು ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಪಂದ್ಯಾಟಗಳನ್ನು ಆಯೋಜಿಸಿಕೊಂಡು ಬರುತಿರುವುದು ಶ್ಲಾಘನೀಯ. ಕೊಡವ ಕೇರಿಗಳ ಮಧ್ಯೆ ಸಾಮರಸ್ಯ ಬೆಸೆಯುವ ಪಂದ್ಯಾಟಗಳು ನಡೆಯಬೇಕು ಎಂದು ಆಶಿಸಿದರು.
ಕಾವೇರಿ ಕೊಡವ ಕೇರಿ ಸಂಘದ ಅಧ್ಯಕ್ಷ ಮೇರಿಯಂಡ ಅರಸು ಅಚ್ಚಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತರ ಕೊಡವ ಕೇರಿಗಳ ಮಧ್ಯೆ ಸಾಮರಸ್ಯ ಮತ್ತು ಭ್ರಾತೃತ್ವವನ್ನು ವೃದ್ಧಿಸಲು ಸತತ ನಾಲ್ಕು ವರ್ಷಗಳಿಂದ ಒಳಾಂಗಣ ಕ್ರೀಡೆಯಾದ ಬ್ಯಾಡ್ಮಿಂಟನ್ ಪಂದ್ಯಾಟಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು 7 ಕೊಡವ ಕೇರಿಗಳು ಕಾರ್ಯನಿರ್ವಹಿಸುತ್ತಿವೆ. ಕೇರಿಗಳ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯುವಂತಾಗಬೇಕು. ಮುಂದೆಯೂ ಪಂದ್ಯಾಟಗಳು ಯಾವುದೇ ವಿಘ್ನಗಳಿಲ್ಲದೆ ಸಾಂಗವಾಗಿ ಸಾಗಬೇಕು ಎಂದು ಹೇಳಿದರು.
ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಪಟ್ಟೆಚೆರುವಂಡ ನಾಚಪ್ಪ ಅವರನ್ನು ಕಾವೇರಿ ಕೊಡವ ಕೇರಿ ಸಂಘದಿಂದ ಸನ್ಮಾನಿಸಲಾಯಿತು. ತಾಂತ್ರಿಕ ಸಲಹೆಗಾರ ನೆರವಂಡ ಸುರೇಶ್ ಮತ್ತು ಕಾವೇರಿ ಕೊಡವ ಕೇರಿಯ ಉಪಾಧ್ಯಕ್ಷ ಅಂಜಪರುವಂಡ ಅನಿಲ್ ಮಂದಣ್ಣ ಇದ್ದರು.