

ಕಡೂರು: ಮಾನಸಿಕ ಒತ್ತಡದಿಂದ ದೂರ ಉಳಿಯಲು ಕ್ರೀಡಾಕೂಟಗಳು ಸಹಕಾರಿ ಎಂದು ಬಾಣೂರು ಗ್ರಾಪಂ ಅಧ್ಯಕ್ಷೆ ಸುನಂದಮ್ಮ ಹೇಳಿದರು.
ತಾಲೂಕಿನ ಬಾಣೂರು ಗ್ರಾಮದ ಶ್ರೀಬಸವೇಶ್ವರ ಪ್ರೌಢ ಶಾಲೆ ಆವರಣದಲ್ಲಿ ಸಖರಾಯಪಟ್ಟಣ-ಬಾಣೂರು ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೆಪಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಕ್ಕಳ ಬೆಳವಣಿಗೆಗೆ ಕ್ರೀಡಾಕೂಟಗಳಿಗೂ ಆದ್ಯತೆ ನೀಡಿ ಶೈಕ್ಷಣಿಕವಾಗಿ ಪ್ರೋತ್ಸಾಹಿಸುತ್ತಿದೆ. ಕ್ರೀಡಾಕೂಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಮುಖ್ಯವಾಗಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಮಾತನಾಡಿ, ಕ್ರೀಡಾಕೂಟದಲ್ಲಿ 13 ಶಾಲೆಗಳಿಂದ ಸುಮಾರು 400 ಮಕ್ಕಳು ಭಾಗವಹಿಸಿದ್ದು, ಗ್ರಾಮದ ಸಹಕಾರದಿಂದ ಕ್ರೀಡಾಕೂಟ ಆಯೋಜನೆಗೊಳಿಸಲು ಸಹಕಾರಿಯಾಗಿದೆ. ಪ್ರತಿಭಾ ಮಕ್ಕಳನ್ನು ಪ್ರೋತ್ಸಾಹಿಸುವುದು ಕ್ರೀಡಾಕೂಟದ ಆಶಯವಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಕಲ್ಲೇಶ್, ಗ್ರಾಪಂ ಸದಸ್ಯರಾದ ರೇಣುಕಾಮೂರ್ತಿ, ಉಮಾಕಾಂತ್, ಅಜ್ಜಯ್ಯ, ನವೀನ್, ಮಾಜಿ ಸದಸ್ಯ ಅಡಕೆ ಪ್ರಸನ್ನ, ನಿವೃತ್ತ ಇಂಜಿನಿಯರ್ ಗವಿರಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಜ್ಞಾನಮೂರ್ತಿ, ಬಸವೇಶ್ವರ ಪ್ರೌಢಶಾಲೆ ಅಧ್ಯಕ್ಷ ದಯಾನಂದ್, ಜಿಲ್ಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಜಗದೀಶ್ ಮತ್ತು ಅಶೋಕ್, ಮುಖ್ಯಶಿಕ್ಷಕ ವಸಂತಕುಮಾರ್, ಮಂಜಪ್ಪ, ಶಶಿಧರ್, ಕೇಶವಮೂರ್ತಿ ಮತ್ತಿತರಿದ್ದರು.