

ಮಡಿಕೇರಿ: ಬಾಂಧವ್ಯ ವೃದ್ಧಿ, ಒಗ್ಗಟ್ಟು ಮೂಡಲು ಕ್ರೀಡಾಕೂಟಗಳು ಪೂರಕ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ ಪ್ರತಿಪಾದಿಸಿದರು.
ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸವಿತಾ ಮಹರ್ಷಿ ಜಯಂತಿ ಹಿನ್ನಲೆಯಲ್ಲಿ ಮಡಿಕೇರಿ ತಾಲೂಕು ಸವಿತಾ ಸಮಾಜದ ವತಿಯಿಂದ ಮಂಗಳವಾರ ಆಯೋಜಿತ ಕ್ರೀಡಾಕೂಟ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಬಹಳ ಸಣ್ಣ ಪ್ರಮಾಣದ ಸಂಖ್ಯೆಯಲ್ಲಿದ್ದರೂ ಸವಿತಾ ಸಮಾಜದವರು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಸವಿತಾ ಸಮಾದವರು ಇತ್ತೀಚಿನ ವರ್ಷಗಳಲ್ಲಿ ಇತರ ಸಮಾಜಗಳಂತೆ ಸಂಘಟಿತರಾಗುವ ಮೂಲಕ ತಮ್ಮ ಸಮಾಜಕ್ಕೆ ಅಗತ್ಯತೆಗಳನ್ನು ಪಡೆಯುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದ್ದಾರೆ. ಸವಿತಾ ಸಮಾಜದ ಕೆಲವು ಬೇಡಿಕೆಗಳ ಬಗ್ಗೆ ಶಾಸಕರ ಗಮನ ಸೆಳೆದು ಅವುಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪತ್ರಕರ್ತ ಹೆಚ್.ಟಿ.ಅನಿಲ್ ಮಾತನಾಡಿ, ಸವಿತಾ ಮಹರ್ಷಿಗಳೇ ಮೂಲಪುರುಷರಾಗಿರುವ ಈ ಸಮಾಜದವರು ಬಹಳ ಪ್ರಾಮುಖ್ಕತೆಯನ್ನು ವಹಿಸುತ್ತಾರೆ. ಸವಿತಾ ಸಮಾಜದವರ ಅತ್ಯಗತ್ಯತೆ ಕೋವಿಡ್ ಲಾಕ್ ಡೌನ್ ಸಂದರ್ಭ ಜನರಿಗೆ ಮತ್ತಷ್ಟು ಹೆಚ್ಚಾಗಿ ಮನವರಿಕೆಯಾಯಿತು ಎಂದರಲ್ಲದೇ, ಹಿಂದಿನ ಕಾಲದಲ್ಲಿ ದೇವರಿಗೆ ಕ್ಷೌರಮಾಡುವಲ್ಲಿಯೂ ಖ್ಯಾತರಾಗಿದ್ದ ಸವಿತಾ ಸಮಾಜದವರು ದೇವರ ಜತೆಗೇ ಧ್ಯಾನ ಕೂಡ ಮಾಡುವ ಪುಣ್ಯ ಪಡೆದಿದ್ದರೆಂದು ಉಲ್ಲೇಖವಿದ ಎಂದು ಹೆಮ್ಮೆಯಿಂದ ನುಡಿದರು.
ರಕ್ತದಾನ ಮಾಡುವ ಮೂಲಕ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಹೆಚ್ಚಿನ ರಕ್ತ ಪೂರೈಸುವ ಕೆಲಸ ಆಗಬೇಕು. ಜಿಲ್ಲಾ ರಕ್ತನಿಧಿಗೆ ಮಾಸಿಕ ೫೦೦ ಯೂನಿಟ್ ರಕ್ತದ ಅಗತ್ಯತೆಯಿದ್ದು, ಆ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗದೇ ಹೋದಾಗ ಅನೇಕ ರೋಗಿಗಳ ಜೀವನಕ್ಕೆ ಸಮಸ್ಯೆಯಾಗುವ ಸಾಧ್ಯತೆಯಿದೆ. ವಿವಿಧ ಸಂಘಸಂಸ್ಥೆಗಳು ಕೂಡ ಸವಿತಾ ಸಮಾದವರಂತೆ ರಕ್ತಸಂಗ್ರಹಣಾ ಶಿಬಿರಗಳನ್ನು ಆಯೋಜಿಸುವಂತಾಗಬೇಕೆಂದು ಮನವಿ ಮಾಡಿದರು.
ಮಡಿಕೇರಿ ತಾಲೂಕು ಸವಿತಾ ಸಮಾಜದ ಕ್ರೀಡಾ ಸಮಿತಿ ಅಧ್ಯಕ್ಷ ಮಧುಚೆಟ್ಟಿಮಾನಿ ಮಾತನಾಡಿ, ಸವಿತಾ ಸಮಾಜಕ್ಕೆ ಕೊಡಗು ಜಿಲ್ಲೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಅಗತ್ಯವಾಗಿ ಬೇಕಾಗಿದೆ. ಯಾವುದೇ ಜನಾಂಗಗಳು ತಮ್ಮ ಸಮಾಜದ ಏಳಿಗೆಗಾಗಿ ಪೈಪೋಟಿ ನಡೆಸುವಂಥ ಬೆಳವಣಿಗೆ ಇರಬಾರದು ಎಂದು ಅಭಿಪ್ರಾಯಪಟ್ಟರು.
ಕೂರ್ಗ್ ಬ್ಲಡ್ ಪೌಂಡೇಷನ್ ಅಧ್ಯಕ್ಷ ವಿನು, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್.ದೋರೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಟಿ.ಮಧು, ತಾಲೂಕು ಸವಿತಾ ಸಮಾಜದ ಮಹಿಳಾಧ್ಯಕ್ಷೆ ಆರ್.ಬಿ.ವಸಂತಿ, ಗೌರವಾಧ್ಯಕ್ಷೆ ಸುಂದರಮ್ಮ, ಸಮಾಜದ ಗೌರವಾಧ್ಯಕ್ಷ ಈರಪ್ಪ, ನಗರಾಧ್ಯಕ್ಷ ಸಂದೇಶ್, ರಕ್ತನಿಧಿ ಕೇಂದ್ರದ ಡಾ.ತೇಜಸ್ವಿನಿ ವೇದಿಕೆಯಲ್ಲಿದ್ದರು.
ರಕ್ತದಾನ ಶಿಬಿರಕ್ಕೆ ಮೂಡಾ ಅಧ್ಯಕ್ಷ ರಾಜೇಶ್.ಬಿ.ವೈ ಸ್ವತಃ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ, ಮಹಿಳೆಯರಿಗೆ ವೈವಿಧ್ಯಮಯ ಕ್ರೀಡೆಗಳು, ಸವಿತಾ ಸಮಾಜದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು.
ಪ್ರದರ್ಶನ ಪಂದ್ಯದಲ್ಲಿ ಸವಿತಾ ಸಮಾಜಕ್ಕೆ ಗೆಲುವು
ಮಡಿಕೇರಿ ಸವಿತಾ ಸಮಾಜ ಮತ್ತು ಕೊಡಗು ಪ್ರೆಸ್ ಕ್ಲಬ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ಆಯೋಜಿಸಲಾಗಿತ್ತು. ಟಾಸ್ ಗೆದ್ದ ಕೊಡಗು ಪ್ರೆಸ್ ಕ್ಲಬ್ ತಂಡ ನಿಗದಿತ ೫ ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ೫೩ ರನ್ ಕಲೆ ಹಾಕಿತು. ತಂಡದ ಪರ ಮಂಜು ಸುವರ್ಣ ೧೩ ಎಸೆತದಲ್ಲಿ ೧ ಸಿಕ್ಸರ್ ೪ ಬೌಂಡರಿಯೊಂದಿಗೆ ೨೬ ರನ್‌ಗಳಿಸಿದರು. ಗುರಿ ಬೆನ್ನಟ್ಟಿದ ಮಡಿಕೇರಿ ಸವಿತಾ ಸಮಾಜ ತಂಡ ೪.೩ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ತಂಡದ ಪರ ಚರಣ್ ೧೯ರನ್ ಕಲೆ ಹಾಕಿದರು. ಪ್ರಥಮ ಸ್ಥಾನ ಪಡೆದ ಸವಿತಾ ಸಮಾಜ ಮತ್ತು ದ್ವಿತೀಯ ಸ್ಥಾನ ಪಡೆದ ಕೊಡಗು ಪ್ರೆಸ್ ಕ್ಲಬ್ ತಂಡಕ್ಕೆ ಬಹುಮಾನ ವಿತರಿಸಲಾಯಿತು.