ಆತ್ಮಸ್ಥೈರ್ಯ ಹೆಚ್ಚಿಸಲು ಕ್ರೀಡಾಕೂಟಗಳು ಪೂರಕ

01bhr 5
Published on

ಬಾಳೆಹೊನ್ನೂರು: ವಿದ್ಯಾರ್ಥಿಗಳಲ್ಲಿ ಆತ್ಮಬಲ, ಆತ್ಮಸ್ಥೈರ್ಯ ಹೆಚ್ಚಲು ಕ್ರೀಡಾಕೂಟಗಳು ಪೂರಕ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಬಿಜಿಎಸ್ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯು ಆತ್ಮಸ್ಥೈರ್ಯ, ಆತ್ಮಬಲ ಹಾಗೂ ಸಂಕಲ್ಪ ಮಾಡಿದರೆ ಮಾತ್ರ ಮನಸ್ಸು ಸದೃಢಗೊಳ್ಳಲು ಸಾಧ್ಯ. ಶರೀರ ಬಲಗೊಂಡು ಮನಸ್ಸು ಸದೃಢಗೊಳ್ಳಲು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಅಗತ್ಯ ಎಂದರು.
ಸರ್ಕಾರ, ಶಿಕ್ಷಣ ಮತ್ತು ಕ್ರೀಡೆಗೆ ಒತ್ತು ನೀಡುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಕೆಲಸ ಆಗಬೇಕಿದ್ದು, ಇವುಗಳಿಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕ್ರೀಡೆ ಮನುಷ್ಯನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಆರೋಗ್ಯವಿದ್ದರೆ ಮನುಷ್ಯನಿಗೆ ಎಲ್ಲವೂ ಲಭ್ಯವಾಗಲಿದೆ. ವಿದ್ಯಾರ್ಥಿಗಳು ವಿವಿಧ ಹಂತದಲ್ಲಿ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ಸರ್ಕಾರ ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಎಂದರು.ವಿದ್ಯಾರ್ಥಿಗಳು ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸಬೇಕು. ಆದಿಚುಂಚನಗಿರಿ ಕ್ಷೇತ್ರ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಶಿಕ್ಷಣ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net