

ಚನ್ನಗಿರಿ: ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ ಎಂದು ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ 2023-24ನೇ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಶಿಕ್ಷಕರು ಪ್ರೇರೇಪಿಸಬೇಕು. ಶಾಲೆಯಲ್ಲಿ ನಡೆಯುವಂತಹ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಕಲಿಸಬೇಕು ಎಂದರು.
ಆಟದಲ್ಲಿ ಶಿಸ್ತು, ಸಮಯ ಪಾಲನೆ ಮುಖ್ಯ. ಸೋಲು ಗೆಲುವಿನ ಮೆಟ್ಟಿಲು ಸೋತವರಿಗೆ ಅನುಭವ ಅಧಿಕವಾಗಿ ಇರುತ್ತದೆ. ಮುಂದೆ ಗೆಲ್ಲಲು ಸೋಲು ಸೋಪಾನವಾಗಲಿದೆ ಎಂದರು.
ತೀರ್ಪುಗಾರರು ಎಲ್ಲ ಕ್ರೀಡಾಪಟುಗಳು ನಮ್ಮವರೇ ಎನ್ನುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ನ್ಯಾಯಯುತವಾಗಿ ತೀರ್ಪು ನೀಡಬೇಕು ಎಂದರು.
ಕ್ರೀಡೆಯಲ್ಲಿ ಕಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್ ಮತ್ತು ಅಥ್ಲೇಟಿಕ್ಸ್ ಆಟಗಳನ್ನು ಮಕ್ಕಳಿಗೆ ಆಡಿಸಲಾಯಿತು.
ಬಿಇಒ ಎಲ್. ಜಯಪ್ಪ, ಜ್ಞಾನದೀಪ ಎಕ್ಸ್‌ಪರ್ಟ್ ಕಾಲೇಜಿನ ಪ್ರಾಚಾರ್ಯ ಮುಕುಂದಯ್ಯ, ಉಪನ್ಯಾಸಕ ಸಂಘದ ಅಧ್ಯಕ್ಷ ರವಿ ಇದ್ದರು.