

ಕೋಲಾರ : ರಾಜ್ಯ ಸರ್ಕಾರಿ ನೌಕರರಿಗೆ 2022-23ರೊಳಗೆ ಕೇಂದ್ರ ಸರ್ಕಾರದ ಸಮಾನ ವೇತನ ಕೊಡಿಸುವ ಸಂಕಲ್ಪದೊಂದಿಗೆ ಸಂಘ ಕೆಲಸ ಮಾಡುತ್ತಿದೆ ಎಂದು ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘ, ಕ್ರೀಡಾ ಸಾಂಸ್ಕೃತಿಕ ಸಂಘ, ಯುವಜನಸೇವೆ, ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಎರಡು ದಿನಗಳ ಜಿಲ್ಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರು ಕಾರ್ಯಾಂಗದ ಭಾಗವೆಂದು ಅರಿತು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರಿ ನೌಕರರ ದಿನ ಆಚರಿಸಲಾಗುತ್ತಿದೆ. ಡಿ ದರ್ಜೆ ನೌಕರರಿಂದ ಐಎಎಸ್‌ವರೆಗಿನ ಸಾಧಕರನ್ನು ಅಂದು ಗೌರವಿಸಲಾಗುವುದು ಎಂದರು. ಜಿಲ್ಲಾ ನೌಕರರ ಕ್ರೀಡಾಕೂಟಕ್ಕೆ ನೀಡುತ್ತಿದ್ದ ಅನುದಾನ 50,000 ರೂ. 1.5 ಲಕ್ಷಕ್ಕೆ ಏರಿಸಲಾಗಿದೆ. ರಾಜ್ಯಮಟ್ಟಕ್ಕೆ 2 ಕೋಟಿ ರೂ. ಬಿಡುಗಡೆಗೆ ಸಿಎಂ ಒಪ್ಪಿದ್ದಾರೆ. ಕ್ರೀಡಾಕೂಟದಲ್ಲಿ ಆವೇಶ, ಉದ್ವೇಗ ಬೇಡ, ಸಂಯಮದಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಡಿಸಿ ಸಿ.ಸತ್ಯಭಾಮ ಮಾತನಾಡಿ, ಸರ್ಕಾರಿ ನೌಕರರಿಗೆ ದೈಹಿಕ ಆರೋಗ್ಯ ಮುಖ್ಯ, ದಿನಕ್ಕೆ ಒಂದು ಗಂಟೆ ಯೋಗ, ವ್ಯಾಯಾಮ ಮಾಡಿ, ರಸ್ತೆ ಉಬ್ಬುಗಳಿದ್ದರೆ ಹೇಗೆ ವಾಹನ ಸಂಚರಿಸಲು ಕಷ್ಟವೋ ಹಾಗೆಯೇ ಹೊಟ್ಟೆ ಉಬ್ಬಿದರೆ ಬದುಕು, ಆರೋಗ್ಯ ಕೆಡುತ್ತದೆ. ಕ್ರೀಡೆ ಜೀವನದ ಭಾಗವಾಗಲಿ ಎಂದರು.
ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ನಾನೊಬ್ಬ ಕಬಡ್ಡಿ ಪಟು. ಕಬಡ್ಡಿಯಲ್ಲಿ ಗೆಲ್ಲುವ ತಂಡಕ್ಕೆ ಟಗರು ಬಹುಮಾನ ನೀಡಲಾಗುವುದು ಎಂದು ೋಷಿಸಿದರು. ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು, ನಗರಸಭೆ ಅಧ್ಯಕ್ಷ ಶ್ವೇತಾ, ಯುವಸಬಲೀಕರಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡಪ್ಪ ಪಾಟೀಲ, ಖಜಾಂಚಿ ಶ್ರೀನಿವಾಸ್, ಗೌರವಾಧ್ಯಕ್ಷ ಶಿವರುದ್ರಯ್ಯ, ಜಂಟಿ ಕಾರ್ಯದರ್ಶಿ ಲೋಕೇಶ್, ಕ್ರೀಡಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ನಾಗರಾಜ್, ಕಾರ್ಯದರ್ಶಿ ಇಂಚರ ನಾರಾಯಣಸ್ವಾಮಿ, ಆರ್. ನಾಗರಾಜ್, ಸಹ್ಯಾದ್ರಿ ಉದಯಕುಮಾರ್ ಮತ್ತಿತರರಿದ್ದರು.
ಮಾಲೂರು ಬಾಲಕಿಯರ ಪಿಯು ಕಾಲೇಜು ಬ್ಯಾಂಡ್‌ಸೆಟ್ ಮನಸೂರೆಗೊಂಡಿತು. ರಾಷ್ಟ್ರೀಯ ಕಬಡ್ಡಿ ಪಟು ಗೋವಿಂದರಾಜು ತಂಡ ಕ್ರೀಡಾಜ್ಯೋತಿಯನ್ನು ದ್ವಿಚಕ್ರ ವಾಹನಗಳ ಮೆರವಣಿಗೆಯಲ್ಲಿ ತಂದು ಅತಿಥಿಗಳಿಗೆ ಹಸ್ತಾಂತರಿಸಿತು.
ಪ್ರಮುಖರಿಗೆ ಸನ್ಮಾನ : ಕಬಡ್ಡಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಜಿಲ್ಲೆಯ ಕ್ರೀಡಾಪಟುಗಳಾದ ಪಿ.ಗೋವಿಂದರಾಜು, ಎಂ.ನಾಗರಾಜು, ನಾರಾಯಣಸ್ವಾಮಿ, ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ್ದ ಎಂ.ಶಿವಣ್ಣ, ಮುನಾವರ್‌ಪಾಷಾ, ಸುಬ್ರಮಣಿರೆಡ್ಡಿ, ನಾರಾಯಣಸ್ವಾಮಿ, ಶ್ರೀಧರ್, ದೀಕ್ಷಿತ್ ದೇವರಾಜ್, ಕೃಷ್ಣಪ್ಪ, ಕೆ.ಚಂದ್ರ, ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. 2500ಕ್ಕೂ ಹೆಚ್ಚಿನ ನೌಕರರು ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು.