

ಕುಶಾಲನಗರ:
ವಿದ್ಯಾರ್ಥಿಗಳು ವ್ಯಾಸಂಗಕ್ಕೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡೆಗಳಿಗೂ ಮೀಸಲಿಡಬೇಕು ಎಂದು ಹೆಚ್.ಡಿ. ಕೋಟೆಯ ಸಂತ ಮೇರಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರೂ ಆದ ದೈಹಿಕ ಶಿಕ್ಷಣ ಸಾಧಕ ಅಂಥೋಣಿ ಪ್ರಭುರಾಜ್ ಹೇಳಿದರು. ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾಲೇಜು ವಿದ್ಯಾರ್ಥಿಗಳ ಕ್ರೀಡೋತ್ಸವವ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆ ಹೊರ ಪ್ರದರ್ಶಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಯಾವುದೇ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಕೀಳರಿಮೆ, ಅಸಹನೆ, ಅತೃಪ್ತಿ ಎಂಬುದು ಹತ್ತಿರವೂ ಸುಳಿಯುವುದಿಲ್ಲ. ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳಿಗೆ ಮಹಾನ್ ಪುರುಷರ ಜೀವನ ಹಾಗೂ ಸಾಧನೆಗಳು ಆದರ್ಶವಾಗಬೇಕಿದೆ ಎಂದರು.
ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಎನ್.ಎನ್. ಶಂಭುಲಿAಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಮಕ್ಕಳ ವ್ಯಾಸಂಗಕ್ಕೆ ನೀಡುವಷ್ಟೇ ಆದ್ಯತೆಯನ್ನು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ಪ್ರಾಮಾಣಿಕ ಪ್ರಯತ್ನವಾಗುತ್ತಿದೆ. ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸನ್ನಡತೆ ಹಾಗೂ ಸಂಯಮವನ್ನು ಕಲಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಣಿವೆ ರಾಮಲಿಂಗೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ಮತ್ತು ಪ್ರಭುರಾಜ್ ಸಾಧನೆಗಳನ್ನು ಗೌರವಿಸಿ ಕ್ರೀಡಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಮಹಾತ್ಮ ಗಾಂಧಿ ಕಾಲೇಜಿನ ಪ್ರಾಂಶುಪಾಲೆ ಟಿ.ಎ. ಲಿಖಿತಾ, ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಕಚೇರಿ ಅಧೀಕ್ಷಕ ಎನ್.ಎನ್. ನಂಜಪ್ಪ, ಆಡಳಿತಾಧಿಕಾರಿ ಮಹೇಶ್ ಅಮೀನ್, ಉಪನ್ಯಾಸಕರಾದ ವಿಕ್ರಮ್, ಚಂದ್ರಶೇಖರ್, ಉಪನ್ಯಾಸಕಿ ಮೇರಿ ಪ್ರಿಯ, ಕ್ರೀಡಾ ಶಿಕ್ಷಕ ದಿನೇಶ್, ಕಬಡ್ಡಿ ಆಟದ ತೀರ್ಪುಗಾರ ಕಾರ್ತಿಕ್ ಇತರರು ಇದ್ದರು.
ಬಳಿಕ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.