ಧಾಜಿಕಾನಿಪ ಸಂಘದ ಕ್ರೀಡಾಕೂಟಕ್ಕೆ ಚಾಲನೆ

New sports new
Published on

ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ (ಧಾಜಿಕಾನಿಪ) ವಾರ್ಷಿಕ ಕ್ರೀಡಾಕೂಟ ಇಲ್ಲಿನ ಪ್ರಕೃತಿ ಸ್ಪೋರ್ಟ್ಸ್ ಫೌಂಡೇಷನ್ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಟದೊಂದಿಗೆ ಸೋಮವಾರ ಆರಂಭಗೊಂಡಿತು.

ಫೌಂಡೇಷನ್ ನಿರ್ದೇಶಕ ರಾಕೇಶ ಬ್ಯಾಡ್ಮಿಂಟನ್​ಗೆ ಚಾಲನೆ ನೀಡಿ, ಆಟ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ದೇಹವನ್ನು ಆರೋಗ್ಯವಾಗಿರಿಸುತ್ತದೆ. ಧಾವಂತದ ಬದುಕಿನಲ್ಲಿ ಕ್ರೀಡೆ ಎಲ್ಲ ವೃತ್ತಿ ಬಾಂಧವರಿಗೆ ಅಗತ್ಯವಾಗಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ನೇತೃತ್ವ ವಹಿಸಿದ್ದರು.

ನಂತರ ಆರಂಭವಾದ ಬ್ಯಾಡ್ಮಿಂಟನ್ ಸಿಂಗಲ್ಸ್​ನಲ್ಲಿ 30ಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಂಡಿದ್ದರು. ಡಬಲ್ಸ್​ನಲ್ಲಿ 10ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು.

ಬ್ಯಾಡ್ಮಿಂಟನ್ ಸಿಂಗಲ್ಸ್​ನಲ್ಲಿ ಗಿರೀಶ ಪಟ್ಟಣಶೆಟ್ಟಿ, ಯಲ್ಲಪ್ಪ ಸೋಲಾರಗೊಪ್ಪ ವಿರುದ್ಧ ಅಂತಿಮ ಪಂದ್ಯದಲ್ಲಿ 21-8, 21-13ನೇರ ಸೆಟ್​ಗಳಿಂದ ಜಯಿಸಿ ಪ್ರಥಮ ಸ್ಥಾನ ಪಡೆದರು. ಯಲ್ಲಪ್ಪ ದ್ವಿತೀಯ ಸ್ಥಾನ ಗಳಿಸಿದರು. ಮಾಲತೇಶ ಹೂಲಿಹಳ್ಳಿ, ಬಸವರಾಜ ಅಣ್ಣಿಗೇರಿ ವಿರುದ್ಧ 15-13ಮತ್ತು 15-10 ನೇರ ಸೆಟ್​ಗಳ ಅಂತರದಿಂದ ಜಯಿಸಿ ತೃತೀಯ ಸ್ಥಾನ ಗಳಿಸಿದರು.

ಡಬಲ್ಸ್​ನಲ್ಲಿ ಯಲ್ಲಪ್ಪ ಸೋಲಾರಗೊಪ್ಪ ಹಾಗೂ ಅಮರೇಗೌಡ ಜೋಡಿ, ಶಿವು ಹಳ್ಯಾಳ ಹಾಗೂ ಹಜರತ್ ಅಲಿ -ಪ್ಯಾಟಿಮನಿ ಜೋಡಿಯ ವಿರುದ್ಧ 21-12 ಮತ್ತು 21-16 ನೇರ ಸೆಟ್​ಗಳಿಂದ ಜಯಿಸಿ ಪ್ರಥಮ ಸ್ಥಾನ ಗಳಿಸಿತು. ಗಿರೀಶ ಪಟ್ಟಣಶೆಟ್ಟಿ ಹಾಗೂ ಗುರು ಭಾಂಡಗೆ ತೃತೀಯ ಸ್ಥಾನ ಪಡೆದರು. ರೆಫ್ರಿಯಾಗಿ ರಾಜಶೇಖರ ಹಿರೇಮಠ ಕಾರ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net