

ಎನ್.ಆರ್.ಪುರ: ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಓದಿನತ್ತ ಉತ್ತೇಜಿಸುತ್ತವೆ ಎಂದು ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಹೇಳಿದರು.
ಶೆಟ್ಟಿಕೊಪ್ಪ ಭದ್ರಾ ಕಾಲನಿಯಲ್ಲಿ ಬುಧವಾರ ಶೆಟ್ಟಿಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿಯ ತವರು ಮನೆ ಎನ್.ಆರ್.ಪುರ ಎನ್ನುವುದು ನಮ್ಮೆಲ್ಲರ ಹೆಮ್ಮೆ. ಪ್ರತಿಭಾ ಕಾರಂಜಿ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯುತ್ತಿರುವುದು ತಾಲೂಕಿಗೆ ಸಂದ ಗೌರವ ಎಂದರು.
ಬಿಇಒ ಕೆ.ಆರ್.ಪುಷ್ಪಾ ಮಾತನಾಡಿ, ಪ್ರತಿ ಮಗುವಿನಲ್ಲೂ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಪಾಲಕರು ಮಾಡಬೇಕು. ನಂತರ ಸಮಾಜ ಪ್ರೋತ್ಸಾಹ ನೀಡಬಲ್ಲದು. ಸೋಲು-ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಮಕ್ಕಳ ಸುಪ್ತ ಪ್ರತಿಭೆಗಳನ್ನು ಹೊರ ಹಾಕುವ ಸೂಕ್ತ ವೇದಿಕೆ ಎಂದರೆ ಅದು ಪ್ರತಿಭಾ ಕಾರಂಜಿ ಕಾರ್ಯಕ್ರಮ. ಪ್ರತಿ ಮಗುವೂ ಜನಿಸುವಾಗ ವಿಶ್ವ ಮಾನವನಾಗಿರುತ್ತದೆ. ಬೆಳೆಯುತ್ತಿದ್ದಂತೆ ಅಲ್ಪ ಮಾನವನಾಗದೆ ವಿಶ್ವ ಮಾನವನಾಗೇ ಇರಬೇಕು ಎಂದು ಹೇಳಿದರು.
ಶೆಟ್ಟಿಕೊಪ್ಪದ ಜುಮ್ಮಾ ಮಸೀದಿ ಧರ್ಮಗುರು ಸಿರಾಜುದ್ದಿನ್ ಸಖಾಫಿ ಮಾತನಾಡಿ, ಮಕ್ಕಳ ಅಕ್ಷರಭ್ಯಾಸದ ಜತೆಗೆ ಅವರಲ್ಲಿರುವ ಪ್ರತಿಭೆ ಗುರ್ತಿಸಿ ಅನಾವರಣಗೊಳ್ಳುವಂತೆ ವೇದಿಕೆ ಸಜ್ಜು ಮಾಡಿಕೊಡಬೇಕು. ಮಕ್ಕಳು ಹೆಚ್ಚು ಕಾಲ ನಾಲ್ಕು ಗೋಡೆಗಳ ಮಧ್ಯೆ ಕೂರುವ ಜತೆಗೆ ಬೌದ್ಧಿಕ ಬೆಳವಣಿಗೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಹೆಚ್ಚು ಸಹಕಾರಿಯಾಗಬಲ್ಲದು ಎಂದರು.
ಪ್ರತಿಭಾ ಕಾರಂಜಿ ಸ್ವಾಗತ ಸಮಿತಿ ಅಧ್ಯಕ್ಷ ಸುಲೇಮಾನ್, ಗ್ರಾಪಂ ಸದಸ್ಯರಾದ ವಾಣಿ ನರೇಂದ್ರ, ಎ.ಬಿ.ಮಂಜುನಾಥ್, ರವೀಂದ್ರ, ಅಶ್ವಿನಿ, ಪೂರ್ಣಿಮಾ, ಲಿಲ್ಲಿಮಾತುಕುಟ್ಟಿ, ಬಿಆರ್‌ಸಿ ಸಮನ್ವಯಾಧಿಕಾರಿ ಸೇವ್ಯಾನಾಯ್ಕಾ, ಎಸ್‌ಡಿಎಂಸಿ ಅಧ್ಯಕ್ಷ ಸುಲೇಮಾನ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಧನಂಜಯ ಮೇದೂರು, ಕಸಾಪ ಮಾಜಿ ಅಧ್ಯಕ್ಷ ಎನ್.ಎಂ.ಕಾಂತರಾಜ್, ಶಾಲೆ ಮುಖ್ಯಶಿಕ್ಷಕಿ ಚಂದ್ರಕಲಾ, ಗ್ರಾಮಸ್ಥರಾದ ಹೈದ್ರೋಸ್‌ಬ್ಯಾರಿ ಇಸ್ಮಾಯಿಲ್, ಹಕೀಂ, ಶಿಕ್ಷಣ ಇಲಾಖೆ ಗೀತಾ, ಸಿಆರ್‌ಪಿ ತಿಮ್ಮೇಶ್, ಭೋಗೇಶ್, ಮಂಜುನಾಥ್, ಅನಂತಪ್ಪ ಇದ್ದರು.