

ಮಳವಳ್ಳಿ: ಕ್ರೀಡಾ ಚಟುವಟಿಕೆ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿಯಾಗಿರುವುದರಿಂದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಆಸಕ್ತಿ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ ಕಿವಿಮಾತು ಹೇಳಿದರು.
ತಾಲೂಕಿನ ಬೆಳಕವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಹದಿನಾಲ್ಕು ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರ ವಿಭಾಗದ ಬಿ.ಜಿ.ಪುರ ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತಾಡಿದರು.
ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಅವಕಾಶವಿದ್ದು, ಮಕ್ಕಳು ಶೈಕ್ಷಣಿಕ ಕಲಿಕಾ ದಿನಗಳಲ್ಲಿ ಕ್ರೀಡೆ ಮತ್ತು ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡುವ ಮೂಲಕ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಾದ ವಿ.ಎಲ್.ಬಸವರಾಜು, ರಾಜಶೇಖರ್, ಎಸ್.ಸೋಮಣ್ಣ, ಕೆ.ಜೆ.ಶಿವರಾಜು, ಪುಟ್ಟದೇವಮ್ಮ, ಎನ್.ಎಂ.ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.
ಗ್ರಾ.ಪಂ.ಅಧ್ಯಕ್ಷ ವೆಂಕಟಪ್ಪ, ಶಿಕ್ಷಣ ಸಂಯೋಜಕ ದಯಾನಂದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ನಾಗೇಶ್, ಉಪಾಧ್ಯಕ್ಷೆ ಬಿ.ಜೆ.ಸತ್ಯವತಿ, ಪ್ರಧಾನ ಕಾರ್ಯದರ್ಶಿ ಆರ್.ದಾಸೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಮಹದೇವಸ್ವಾಮಿ, ಸ.ನೌ.ಸಂ.ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಶಿವಶಂಕರ್, ಸಿ.ಆರ್.ಪಿಗಳಾದ ಮಹಾಜಯಲಿಂಗು, ಶಿವಕುಮಾರ್, ಧನಂಜಯ್ ಸೇರಿದಂತೆ ಇತರರಿದ್ದರು.