

ಮುಂಡರಗಿ: ಮನುಷ್ಯನಿಗೆ ಕ್ರೀಡೆ ಬಹುಮುಖ್ಯ. ಸದೃಢ ದೇಹ ಮತ್ತು ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ. ಪ್ರತಿಯೊಬ್ಬರು ದೇಹದ ಅಂಗಾಂಗಗಳ ಸುರಕ್ಷತೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯ. ವಿದ್ಯಾರ್ಥಿಗಳು ದುಶ್ಚಟ್ಟದಿಂದ ದೂರವಿದ್ದು, ಸಾಧನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹೇಳಿದರು.
ಪಟ್ಟಣದ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದಲ್ಲಿ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ, ಕೆ.ಆರ್. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಏಕವಲಯ ಪುರುಷರ ಹಾಗೂ ಮಹಿಳೆಯರ ನೆಟ್ಬಾಲ್ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಕ್ರೀಡೆ, ಯೋಗ, ವ್ಯಾಯಾಮಗಳಿಂದ ದೂರವಾಗಿ ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದೇವೆ. ವೈದ್ಯರ ಸಲಹೆ ಮೇರೆಗೆ ಆರೋಗ್ಯ ಕಾಪಾಡಿಕೊಳ್ಳುವಂತಾಗಿದೆ. ಉತ್ತಮ ಆರೋಗ್ಯಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಉತ್ತಮ ಆರೋಗ್ಯಯುತ ಬದುಕು ಕಟ್ಟಿಕೊಳ್ಳಬೇಕು. ಕ್ರೀಡೆ ಮೂಲಕ ನಿಮ್ಮ ಬದುಕು ಹಸನಾಗಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಆಶೀರ್ವಚನ ನೀಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಕಾಲೇಜಿನಿಂದ ಇಂತಹ ಪಂದ್ಯಾವಳಿ ಆಯೋಜನೆ ಮಾಡುತ್ತ ಬರಲಾಗುತ್ತಿದೆ. ಆಟದಿಂದ ಶರೀರದಲ್ಲಿ ವಿಶೇಷ ಸ್ಥೈರ್ಯ ಸಿಗಲಿದೆ. ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಅಭಿವೃದ್ಧಿ ಸಮಿತಿ ಉಪಕಾರ್ಯಾಧ್ಯಕ್ಷ ವಿ.ಎಫ್. ಗುಡದಪ್ಪನವರ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಕ್ರೀಡೆಗೆ ವಿಶೇಷ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಭಾಗವಹಿಸಲು ಒಳ್ಳೆಯ ಅವಕಾಶ ದೊರೆಯುತ್ತಿವೆ. ಆಟ, ಪಾಠಗಳ ಮೂಲಕ ಉತ್ತಮ ಸ್ಥಾನ ಹೊಂದಬೇಕು ಎಂದರು.
ಜ.ಅ.ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ, ಈರಣ್ಣ ಕರ್ಜಗಿ, ಎಂ.ಜಿ. ಗಚ್ಚಣ್ಣವರ, ಎಂ.ಎಸ್. ಶಿವಶೆಟ್ಟರ, ಡಾ. ಎ.ಬಿ. ಶಿವಶೆಟ್ಟರ, ಡಾ.ಮನೋಜ ಕೋಪರ್ಡೆ, ಗಂಗಾಧರ ಪಾಟೀಲ, ಗಿರೀಶ ಪೂಜಾರ ಹಾಗೂ ಕಾಲೇಜ್ ಸಿಬ್ಬಂದಿ, ಕ್ರೀಡಾಪಟುಗಳು ಇದ್ದರು. ಪ್ರಾಚಾರ್ಯ ಡಾ.ಸಂತೋಷ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕ ಡಾ.ಆರ್.ಎಚ್. ಜಂಗಣವಾರಿ ನಿರೂಪಿಸಿದರು.