

ಹುಬ್ಬಳ್ಳಿ: ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯ ಆವರಣದಲ್ಲಿ ಎಲ್ ಎಲ್ ಬಿ ಮತ್ತು ಎಲ್ಎಲ್ಎಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಮತ್ತು ವಿದ್ಯಾರ್ಥಿ ಸಂಘ, ಜಿಮಖಾನಾ, ರೆಡ್ ಕ್ರಾಸ್, ಕ್ರೀಡಾ, ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಶನಿವಾರ ನೆರವೇರಿತು.
ಅತಿಥಿಗಳಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ಡಾ. ಮಲ್ಲಿಕಾ ಘಂಟಿ
ಮಾತನಾಡಿ, ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕಾನೂನು ವಿದ್ಯಾರ್ಥಿಗಳ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ. ಮಹಿಳಾ ಸಮಾನತೆ ಮತ್ತು ಮಹಿಳೆ ಅನುಭವಿಸುತ್ತಿರುವ ಸಮಸ್ಯೆಗಳು ಇಂದು ಚರ್ಚಿತ ವಿಷಯಗಳಾಗಬೇಕಿದೆ ಎಂದರು.
ಬ್ರಿಟಿಷರ ಮೌಢ್ಯದ ನ್ಯಾಯಿಕ ಆಚರಣೆಯಿಂದ ಹೊರಬಂದು ಭಾರತೀಯ ವಾಸ್ತವ ನ್ಯಾಯಾಲಯಗಳ ಸ್ಥಾಪನೆ ಇಂದಿನ ಅವಶ್ಯಕತೆಯಾಗಿದೆ. ನ್ಯಾಯಾಧೀಶರು ಮತ್ತು ವಕೀಲರು ಅಂತಃಕರಣದಿಂದ ಸಮಾಜವನ್ನು ನೋಡಿದಾಗ ಜಲ್ವಂತ ಸಮಸ್ಯೆಗಳ ಪರಿಹಾರ ಸಾಧ್ಯ ಎಂದರು.
ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ ಮಾತನಾಡಿ, ಸ್ಫೂರ್ತಿ ಎಂಬ ಶೀರ್ಷಿಕೆ ಅಡಿಯಲ್ಲಿ ಬೀಳ್ಕೊಡುವ ಸಮಾರಂಭ ನಡೆದಿದೆ. ಇದರ ಮೂಲ ಉದ್ದೇಶ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಾಗಿದೆ. ನಾಯಕತ್ವದ ಗುಣಗಳನ್ನು ಬೆಳೆಸುವುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಕಾನೂನು ಓದುವುದಷ್ಟೆ ಅಲ್ಲ ಜೀವನದ ಆದರ್ಶ, ಮೌಲ್ಯಗಳನ್ನು ತಿಳಿಯಬೇಕು. ಭಾರತೀಯ ಸಮಾಜದಲ್ಲಿ ಮಹಿಳೆ ಮುನ್ನಲೆಗೆ ಬರಬೇಕಾದರೆ ಅವಳಿಗೆ ಸಮಾನ ಸ್ಥಾನಮಾನಗಳನ್ನು ನೀಡಬೇಕು. ಭಾರತೀಯ ಸಂವಿಧಾನ ಮಹಿಳೆಯ ಮಹಾ ರಕ್ಷಕನಂತಿದ್ದು ಡಾ. ಬಿ.ಆರ್. ಅಂಬೇಡ್ಕರ ಅವರ ಮೂಲ ಆಶಯದಂತೆ ಅವಳಿಗೆ ಕಾನೂನಿನ ರಕ್ಷಣೆ ನೀಡಬಲ್ಲ ಒಂದು ಶ್ರೇಷ್ಠ ಗ್ರಂಥವಾಗಿದೆ ಎಂದು ಹೆಳಿದರು.
ಸಿಂಡಿಕೇಟ್ ಸದಸ್ಯ ವಸಂತ ಲದ್ವಾ, ಇತರರು ಉಪಸ್ಥಿತರಿದ್ದರು. ಕ್ರೀಡಾ ಚಟುವಟಿಕೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಡಾ. ರಾಜೇಂದ್ರಕುಮಾರ ಹಿಟ್ಟಣಗಿ ವಾರ್ಷಿಕ ವರದಿ ವಾಚನ ಮಾಡಿದರು. ಪ್ರಮತಿ ಪ್ರಾರ್ಥನೆ ಗೀತೆ ಹಾಡಿದರು. ಕುಲಸಚಿವೆ ಅನುರಾಧ ವಸ್ತ್ರದ ಸ್ವಾಗತಿಸಿದರು. ಡಾ. ರಂಗಸ್ವಾಮಿ ಡಿ. ಪರಿಚಯಿಸಿದರು. ಪ್ರಾಚಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪಾರ್ವತಿ ವಂದಿಸಿದರು.