ಮೂರ್ನಾಲ್ಕು ತಿಂಗಳಲ್ಲಿ ಕ್ರೀಡಾ ಸಂಕೀರ್ಣ ಕಟ್ಟಡ ಲೋಕಾರ್ಪಣೆ

SC New
Published on

ಹುಬ್ಬಳ್ಳಿ : ಹತ್ತಾರು ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಿಗೆ ತರಬೇತಿ ನೀಡುವ ಜತೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳನ್ನು ಆಯೋಜಿಸುವ ಉದ್ದೇಶದಿಂದ ಹುಬ್ಬಳ್ಳಿ ಲೋಹಿಯಾನಗರದಲ್ಲಿ ನಿರ್ವಿುಸುತ್ತಿರುವ ಇಂಟಿಗ್ರೇಟೆಡ್ ಸ್ಪೋರ್ಟ್ಸ್ ಸ್ಟೇಡಿಯಂ ಕಾಂಪ್ಲೆಕ್ಸ್ (ಕ್ರೀಡಾ ಸಂಕೀರ್ಣ ಕಟ್ಟಡ) ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು, ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ನಿಖಿಲ್ ಕಾಡ್ಸೆ ಅವರೊಂದಿಗೆ ಕ್ರೀಡಾ ಸಂಕೀರ್ಣಕ್ಕೆ ಶನಿವಾರ ಭೇಟಿ ನೀಡಿದ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

16 ಎಕರೆ ವ್ಯಾಪ್ತಿಯ ಪ್ರದೇಶದಲ್ಲಿ 172 ಕೋಟಿ ರೂ. ವೆಚ್ಚದಲ್ಲಿ ಈ ಕ್ರೀಡಾ ಸಂಕೀರ್ಣ ನಿರ್ಮಾಣಗೊಳ್ಳುತ್ತಿದೆ. ಕೇಂದ್ರ ಸರ್ಕಾರ 8 ಕೋಟಿ ರೂ. ನೀಡಿದ್ದು, ಇನ್ನುಳಿದ ಹಣವನ್ನು ಸ್ಮಾರ್ಟ್​ಸಿಟಿ ಯೋಜನೆ ಅಡಿ ವಿನಿಯೋಗಿಸಲಾಗಿದೆ ಎಂದು ಹೇಳಿದರು.

ದೇಶದ ವಿವಿಧ ಮಹಾನಗರಗಳಲ್ಲಿ ಕೆಲ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಿಗೆ ತರಬೇತಿ ನೀಡುವ ಕ್ರೀಡಾ ಸಂಕೀರ್ಣ ಕಟ್ಟಡಗಳು ಇವೆ. ಆದರೆ, ಒಂದೇ ಸೂರಿನಡಿ 16 ಒಳಾಂಗಣ ಹಾಗೂ 6 ಹೊರಾಂಗಣ ಕ್ರೀಡೆಗಳಿಗೆ ತರಬೇತಿ ನೀಡುವ ಸುಮಾರು 15 ಎಕರೆ ವಿಸ್ತೀರ್ಣದ ಬೆರಳೆಣಿಕೆಯ ಕ್ರೀಡಾ ಸಂಕೀರ್ಣ ಕಟ್ಟಡಗಳಲ್ಲಿ ಹುಬ್ಬಳ್ಳಿಯ ಇಂಟಿಗ್ರೇಟೆಡ್ ಸ್ಪೋರ್ಟ್ಸ್ ಸ್ಟೇಡಿಯಂ ಕಾಂಪ್ಲೆಕ್ಸ್ ಸಹ ಒಂದು ಎಂಬುದು ಹುಬ್ಬಳ್ಳಿಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಕಳೆದ ಕೆಲ ವರ್ಷಗಳಿಂದ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿರುವುದರಿಂದ ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್​ಗಳಲ್ಲಿ ಹೆಚ್ಚು ಪದಕಗಳನ್ನು ಬಾಚುತ್ತಿದ್ದಾರೆ. ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯ ಹಾಗೂ ಸುತ್ತಲಿನ ರಾಜ್ಯಗಳ ಕ್ರೀಡಾಪಟುಗಳಿಗೆ ದೂರದ ದೆಹಲಿ, ಮುಂಬೈನಂತಹ ಮಹಾನಗರಗಳಿಗೆ ತೆರಳಿ, ತರಬೇತಿ ಪಡೆಯುವುದು ವೆಚ್ಚದಾಯಕವಾಗುತ್ತಿತ್ತು. ಅಂತಹ ಕ್ರೀಡಾಪಟುಗಳಿಗೆ ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿರುವ ಕ್ರೀಡಾ ಸಂಕೀರ್ಣ ಹೆಚ್ಚು ಅನುಕೂಲಕರವಾಗಿದೆ ಎಂದರು.

ಈಗಾಗಲೇ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 262 ಕಾರುಗಳನ್ನು ಏಕಕಾಲಕ್ಕೆ ಪಾರ್ಕ್ ಮಾಡಬಹುದಾಗಿದೆ. ಪ್ರೊ ಕಬಡ್ಡಿ, ಪ್ರೊ ಖೋಖೋಗಳಂತಹ ಕ್ರೀಡೆಗಳನ್ನು ಸಹ ಆಯೋಜಿಸುವ ಉದ್ದೇಶವಿದೆ. ಇದರಿಂದ ಈ ಭಾಗದ ಅಭಿವೃದ್ಧಿಗೂ ಸಹಾಯವಾಗುತ್ತದೆ ಎಂದು ತಿಳಿಸಿದರು.

ಹು-ಧಾ ಸ್ಮಾರ್ಟ್​ಸಿಟಿ ಕಂಪನಿಯ ಡಿಜಿಎಂ ಚನ್ನಬಸವರಾಜ ಧರ್ಮಂತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net