

ಶನಿವಾರಸಂತೆ : ಸದೃಢ ದೇಹ ಮತ್ತು ಮನಸ್ಸಿಗೆ ಕ್ರೀಡೆ ಪೂರಕ ಶಕ್ತಿಯಾಗಿದೆ ಎಂದು ಆಲೂರು ಸಿದ್ದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಧಿಕಾರಿಗಳ ಕಚೇರಿ ಹಾಗೂ ಆಲೂರುಸಿದ್ದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಿಂದ ಇತ್ತೀಚೆಗೆ ಆಲೂರುಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಗ್ರಾಮೀಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶನಿವಾರಸಂತೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಬೆಳವಣಿಗೆ ಮತ್ತು ಕ್ರೀಡಾ ಕ್ಷೇತ್ರದ ಬೆಳವಣಿಗೆಗಾಗಿ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಮಕ್ಕಳು ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿಕೊಂಡು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು. ಸೋಲು, ಗೆಲುವನ್ನು ಸಮವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ದೈಹಿಕ ಶಿಕ್ಷಣ ಇಲಾಖೆಯ ಪರಿವೀಕ್ಷಕಿ ಸುಕುಮಾರಿ ಮಾತನಾಡಿ, ಇಂದಿನ ಕಾಲದಲ್ಲಿ ಕ್ರೀಡೆಗಳು ಮಹತ್ವ ಕಳೆದುಕೊಳ್ಳುತ್ತಿದೆ. ಎಲ್ಲರು ಮೊಬೈಲ್‌ಗೆ ದಾಸರಾಗುತ್ತಿದ್ದರೆ. ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ರಾಷ್ಟ್ರ ಪ್ರೇಮದ ಜೊತೆಯಲ್ಲಿ ಕ್ರೀಡಾಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಲೂರುಸಿದ್ದಾಪುರ ಪಿಡಿಒ ಹರೀಶ್‌ಮಾತನಾಡಿ, ಪಾಲಕರು ತಮ್ಮ ಮಕ್ಕಳು ವೈದ್ಯರಾಗಬೇಕು, ಇಂಜಿನಿಯರ್ ಆಗಬೇಕು ಎಂದು ಆಸ ಪಡುತ್ತಾರೆ. ಆದರೆ ನನ್ನ ಮಗ ಒಬ್ಬ ಕ್ರೀಡಾಪಟು ಆಗಬೇಕು ಎಂದು ಆಸೆ ಪಡುವವರು ಕಡಿಮೆ. ಮಕ್ಕಳಿಗೆ ಪ್ರೋತ್ಸಾಹದ ಕೊರತೆಯಿಂದ ವಿಶ್ವ ಮಟ್ಟದ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸುವವರ ಸಂಖ್ಯೆ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟರು.
ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಿ.ಎಂ.ಹೇಮಂತ್, ಆಲೂರುಸಿದ್ದಾಪುರ ಮುರಾರ್ಜಿ ವಸತಿ ಶಾಲಾ ಪ್ರಾಂಶುಪಾಲರಾದ ಕೆ.ಆರ್.ಭಾರತಿ, ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಸೋಮೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಲೂರುಸಿದ್ದರಾಪುರ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಸದಸ್ಯೆ ದಮಯಂತಿ ಕರುಂಬಯ್ಯ, ಪ್ರಾಢಶಾಲೆಯ ಮುಖ್ಯ ಶಿಕ್ಷಕ ಸೋಮಶೇಖರ್, ಎಸ್‌ಡಿಎಂಸಿ ಉಪಾಧ್ಯಕ್ಷ ಪೊನ್ನಪ್ಪ, ತಾಲೂಕು ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಕರುಂಬಯ್ಯ, ಶನಿವಾರಸಂತೆ ವಿಘ್ನೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಟಿ.ಪಿ.ಶಿವಪ್ರಕಾಶ್ ಇತರರು ಇದ್ದರು.
ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ ಕ್ರೀಡಾಕೂಟದ ಧ್ವಜರೋಹಣ ನೆರವೇರಿಸಿದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಹರೀಶ್ ಕ್ರೀಡಾಜ್ಯೋತಿ ಸ್ವೀಕರಿಸಿ ಓಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.