

ಮೈಸೂರು: ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್) ವತಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಸಿದ್ಧಾರ್ಥನಗರದ ಶಿಕ್ಷಕರ ಭವನದಲ್ಲಿ ಶನಿವಾರ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿತ್ತು.
ವಿಜೇತರಿಗೆ ಬಹುಮಾನ ವಿತರಿಸಿದ ಮೈಮುಲ್ ಅಧ್ಯಕ್ಷ ಚೆಲುವರಾಜು ಮಾತನಾಡಿ, ಇದೊಂದು ಮಾದರಿ ಕಾರ್ಯಕ್ರಮ ಆಗಿದ್ದು, ಮುಂದಿನ ದಿನಗಳಲ್ಲಿ ನಾಲ್ಕು ದಿನಗಳ ಕಾಲ 10 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಿದ್ದೇವೆ. ನೀವು ಸಹ ಒಕ್ಕೂಟದ ಭಾಗವಾಗಿದ್ದಿರಿ, ಒಕ್ಕೂಟದಲ್ಲಿ 10 ಲಕ್ಷಕ್ಕೂ ಹೆಚ್ಚು ಲೀಟರ್ ಸಂಗ್ರಹಣೆಯಲ್ಲಿ ನಿಮ್ಮೆಲ್ಲರ ಪರಿಶ್ರಮವಿದ್ದು, ನಿಮ್ಮ ಸಂಘಗಳು ಬೆಳೆಯಬೇಕು. ರೈತರ ಕೆಲಸ ಎಲ್ಲರಿಗೂ ಸಿಗುವುದಿಲ್ಲ, ನಿಮಗೆ ಸಿಕ್ಕಿರುವುದು ಅದೃಷ್ಟ ಎಂದರು.
ಇಂದು ಪ್ರತಿ ಬೆಲೆಯೂ ಏರಿಕೆ ಆಗುತ್ತಿದೆ. ಪಶು ಆಹಾರ, ಔಷಧ ಹಾಗೂ ರೈತರ ದಿನಬಳಕೆಯ ಪ್ರತಿಯೊಂದು ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಈ ಹೈನುಗಾರಿಕೆಯನ್ನು ಸಾಕಷ್ಟು ರೈತರು ಉಪಕಸುಬಿನಂತೆ ಬೆಳೆಸಿಕೊಂಡು ಹೋಗುತ್ತಿದ್ದಾರೆ. ಇದೊಂದು ಉದ್ಯೋಗವಾಗಿ ಬೆಳೆಯಬೇಕಾದರೆ ಹಾಲಿನ ದರ ಸಹ ಹೆಚ್ಚಳ ಆಗಬೇಕಿದೆ. ದಕ್ಷಿಣ ಕನ್ನಡ ಬಿಟ್ಟರೆ ಹಾಲಿಗೆ ಅತಿಹೆಚ್ಚು ದರ ನೀಡುವುದು ಮೈಮುಲ್. ನಿಮ್ಮೆಲ್ಲರ ಸಹಕಾರದಿಂದ ಅತಿಹೆಚ್ಚು ಹಾಲಿನ ದರ ನೀಡಲು ಶ್ರಮಿಸಲಾಗುವುದು ಎಂದು ಹೇಳಿದರು.
ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಮಾತನಾಡಿ, ಒಕ್ಕೂಟದ ಇತಿಹಾಸದಲ್ಲೇ ಮುಖ್ಯಕಾರ್ಯನಿರ್ವಾಹಕರುಗಳಿಗೆ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಮುಂದೆ ಎಲ್ಲ ರೀತಿಯ ಆಟೋಟಗಳನ್ನು ಆಡಿಸಲು ಕ್ರಮವಹಿಸಲಾಗುವುದು. ಆರೋಗ್ಯ ವೃದ್ಧಿಗೆ ನಶಿಸುತ್ತಿರುವ ಗ್ರಾಮೀಣ ಆಟಗಳಿಗೆ ಮರು ಚಾಲನೆ ನೀಡಬೇಕಿದೆ. ಗುಣಮಟ್ಟದ ಹಾಲಿನ ಸರಬರಾಜಿಗೆ ಕ್ರಮವಹಿಸಿ ಎಂದರು.
ನಿರ್ದೇಶಕ ಬಿ.ಎನ್.ಸದಾನಂದ ಮಾತನಾಡಿ, ಮೈಮುಲ್ ರೈತರ ಸಂಸ್ಥೆಯಾಗಿದ್ದು ಇದನ್ನು ಬೆಳೆಸಲು ಎಲ್ಲರ ಪ್ರಯತ್ನ ಮುಖ್ಯವಾಗಿದೆ. ಈ ದಿಸೆಯಲ್ಲಿ ಗ್ರಾಮಾಂತರ ಭಾಗದಲ್ಲಿ ನೀವು ಹಾಲು ಶೇಖರಣೆ ಮಾಡಿದರಷ್ಟೇ ಸಾಲದು. ಹಾಲಿನ ಗುಣಮಟ್ಟ ಉಳಿಸಿಕೊಳ್ಳಬೇಕು. ಪ್ರಮುಖವಾಗಿ ಗ್ರಾಮಾಂತರ ಭಾಗದ ಜನರಿಗೆ ಅತಿಹೆಚ್ಚು ನಂದಿನಿ ಉತ್ಪನ್ನಗಳನ್ನೇ ಬಳಸುವಂತೆ ಅರಿವು ಮೂಡಿಸಿ, ಆಗ ಮಾತ್ರವೇ ನಾವು ನೀವು ಹಾಗೂ ರೈತರೆಲ್ಲರೂ ಉಳಿಯಲು ಸಾಧ್ಯ ಎಂದು ಹೇಳಿದರು.
ಮೈಮುಲ್ ನಿರ್ದೆಶಕರಾದ ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಪಿ.ಎಂ.ಪ್ರಸನ್ನ, ಕೆ.ಈರೇಗೌಡ, ಕೆ.ಎಸ್.ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ, ಮಾರುಕಟ್ಟೆ ವ್ಯವಸ್ಥಾಪಕ ಎಚ್.ಕೆ.ಜಯಶಂಕರ್, ಪಿ ಆ್ಯಂಡ್ ಐ ವ್ಯವಸ್ಥಾಪಕ ಕರಿಬಸವರಾಜು ಇದ್ದರು.
ಜಿಲ್ಲೆಯ 1200 ಕಾರ್ಯನಿರ್ವಾಹಕ ಅಧಿಕಾರಿಗಳ ಪೈಕಿ ತಾಲೂಕು ಮಟ್ಟದಲ್ಲಿ ವಿಜೇತರಾದ 195 ಮಂದಿಗೆ ಪದಕಗಳ ನೀಡಿ ಸನ್ಮಾನಿಸಲಾಯಿತು. ತಾಲೂಕು ಮಟ್ಟದಲ್ಲಿ ವಿಜೇತರಾದ ತಂಡಗಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದವು. ಜಿಲ್ಲಾ ಮಟ್ಟದ ಹಗ್ಗಾ ಜಗ್ಗಾಟದಲ್ಲಿ ಪಿರಿಯಾಪಟ್ಟಣ ಪ್ರಥಮ ಹಾಗೂ ಹುಣಸೂರು ದ್ವಿತೀಯ ಸ್ಥಾನ ಪಡೆಯಿತು. ರಂಗೋಲಿ ಸ್ಪರ್ಧೆಯಲ್ಲಿ ಮೈಸೂರು ತಾಲೂಕಿನ ಮೈದಾನಹಳ್ಳಿ ಸುಮಲತಾ( ಪ್ರಥಮ) ಎಚ್.ಡಿ.ಕೋಟೆ ತಾಲೂಕಿನ ಮುದ್ದಯ್ಯನಹುಂಡಿ ರೇಣುಕಾ(ದ್ವಿತೀಯ), ಹುಣಸೂರು ತಾಲೂಕಿನ ಹಂಚ್ಯಾದ ಕವಿತ(ತೃತೀಯ) ಬಹುಮಾನ ಪಡೆದುಕೊಂಡರು.