

ಪಂಕಜ ಕೆ.ಎಂ. ಬೆಂಗಳೂರು
ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ 29 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರೋಬಾಟಿಕ್ ಶಸಚಿಕಿತ್ಸೆ ಮತ್ತು ಕ್ರೀಡಾ ಕೇಂದ್ರದ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಜ್ಜುಗೊಳ್ಳುತ್ತಿದೆ.
2 ಅಂತಸ್ತಿನ ಕಟ್ಟಡದಲ್ಲಿ ವಿದ್ಯುತ್, ನೀರಿನ ಸಂಪರ್ಕ ಸೇರಿ ಒಳಾಂಗಣ ವಿನ್ಯಾಸ ಕಾರ್ಯ ಸಾಗಿದೆ. ಶೀಘ್ರದಲ್ಲೇ ವೈದ್ಯಕೀಯ ಉಪಕರಣಗಳ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದ್ದು, ಇನ್ನು 3 ತಿಂಗಳಲ್ಲಿ ಕಟ್ಟಡ ಸೇವೆಗೆ ಲಭ್ಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ 40-50 ವರ್ಷ ಮೇಲ್ಪಟ್ಟವರಲ್ಲಿ ಸಂಧಿವಾತದ ಸಮಸ್ಯೆ ಸಾಮಾನ್ಯವಾಗಿದೆ. ಇದಲ್ಲದೆ ಅಪಘಾತ ಪ್ರಕರಣಗಳು ಅಧಿಕವಾಗಿವೆ. ಮಂಡಿಚಿಪ್ಪು ಬದಲಿ ಶಸಚಿಕಿತ್ಸೆ, ಟ್ರಾಮಾ ಚಿಕಿತ್ಸೆ ಸೇರಿ ರೋಬಾಟಿಕ್ ಶಸಚಿಕಿತ್ಸೆಯನ್ನು ಸಹ ನಡೆಸಲಾಗುತ್ತಿದೆ. ಕ್ರೀಡಾ ಗಾಯಾಳುಗಳಿಗೆ ಆತ್ಯಾಧುನಿಕ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಕ್ರೀಡಾ ಕೇಂದ್ರ ನಿರ್ಮಿಸಲಾಗುತ್ತಿದೆ.
ಕಾಮಗಾರಿ ವಿಳಂಬ: ಸಂಸ್ಥೆಯ ಆವರಣದಲ್ಲಿ 1.15 ಎಕರೆ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಇದಕ್ಕಾಗಿ 2021ರ ಜುಲೈನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 15 ತಿಂಗಳಲ್ಲಿ ಕಟ್ಟಡ ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಕೋವಿಡ್‌ನಿಂದಾಗಿ ಕಾಮಗಾರಿ ವಿಳಂಬವಾಯಿತು. ಇದೀಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಒಳಾಂಗಣ ವಿನ್ಯಾಸ, ವೈದ್ಯಕೀಯ ಉಪಕರಣಗಳ ಅಳವಡಿಕೆಯಷ್ಟೇ ಬಾಕಿಯಿದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಯೋಗಾಲಯ: ಕ್ರೀಡಾ ಕೇಂದ್ರವು ಪ್ರಯೋಗಾಲಯವನ್ನು ಒಳಗೊಂಡಿದ್ದು, ಕ್ರೀಡಾಪಟುಗಳನ್ನು ಶಸಚಿಕಿತ್ಸೆಗೆ ಒಳಪಡಿಸುವ ಮೊದಲು ಮತ್ತು ನಂತರ ಫಿಸಿಯೋಥೆರಪಿಸ್ಟ್ ತಂಡದೊಂದಿಗೆ ಮೌಲ್ಯಮಾಪನ ಮಾಡಲಾಗುತ್ತದೆ. ಅಗತ್ಯ ಸಾಧನಗಳನ್ನು ಬಳಸಿ ದೈಹಿಕ ಚಿಕಿತ್ಸೆ ಜತೆಗೆ ನಿರ್ದಿಷ್ಟ ವ್ಯಾಯಾಮವನ್ನೂ ಹೇಳಿಕೊಡಲಾಗುತ್ತದೆ.
ಕಟ್ಟಡದ ವೈಶಿಷ್ಟ್ಯ: ಕಟ್ಟಡದ ಪ್ರತಿ ಮಹಡಿ 22 ಸಾವಿರ ಚದರಿ ಅಡಿ ವಿಸ್ತೀರ್ಣ ಹೊಂದಿದೆ. ತಳಮಹಡಿಯಲ್ಲಿ ವಾಹನಗಳ ನಿಲುಗಡೆ, ಎಕ್ಸ್‌ರೇ ಘಟಕ, ಲ್‌ಟಿ ಲಾಬಿ ಇರಲಿದ್ದು, ನೆಲಮಹಡಿಯಲ್ಲಿ 17 ಹೊರ ರೋಗಿಗಳ ವಿಭಾಗ, ಅಪಘಾತ ಚಿಕಿತ್ಸಾ ವಿಭಾಗ, ರೋಗಿಗಳ ಪರೀಕ್ಷಾ ಕೊಠಡಿ, ಔಷಧಾಲಯ, ಆರೋಗ್ಯ ಯೋಜನೆಯ ಮಾಹಿತಿ ಕೇಂದ್ರ ಇರಲಿವೆ. 1ನೇ ಮಹಡಿಯಲ್ಲಿ ಕ್ರೀಡಾ ಪುನರ್ವಸತಿ ಕೇಂದ್ರ, ಫಿಜಿಯೋಥೆರಪಿ ಕೇಂದ್ರ, ಸಮ್ಮೇಳನ ಸಭಾಂಗಣ, ಪ್ರಾಧ್ಯಾಪಕರು ಹಾಗೂ ವೈದ್ಯರ ಕೊಠಡಿ ಹಾಗೂ 2ನೇ ಮಹಡಿಯಲ್ಲಿ 2 ಅತ್ಯಾಧುನಿಕ ಶಸಚಿಕಿತ್ಸಾ ಕೊಠಡಿ, ರೋಗಿಗಳ ಕುಟುಂಬದವರಿಗೆ ಕಾಯುವ ಕೊಠಡಿ, ಕ್ರಯೋಥೆರಪಿ, ರೆಕಾರ್ಡ್ ರೂಂ ಇರಲಿವೆ. ಚಿಕಿತ್ಸೆ ನಂತರ ರೋಗಿಗಳನ್ನು ಹಳೆಯ ಕಟ್ಟಡದ ವಾರ್ಡ್‌ಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಸ್ಕೈವಾಕ್ ನಿರ್ಮಿಸಲಾಗುತ್ತಿದೆ.
ಕೋಟ್:
ಸಂಸ್ಥೆಗೆ ಟ್ರಾಮಾ, ಅಪಘಾತ, ಸಂಧಿವಾತ ಸೇರಿ ನಾನಾ ಸಮಸ್ಯೆಗಳಿಂದ ನಿತ್ಯ 300-350 ಹೊರ ರೋಗಿಗಳು ಆಗಮಿಸುತ್ತಾರೆ, ಟ್ರಾಮಾ ಸೇರಿ ನಿತ್ಯ 25-30 ರೋಗಿಗಳು ದಾಖಲಾಗುತ್ತಾರೆ. ಇವರಲ್ಲಿ ಕ್ರೀಡಾ ಗಾಯಾಳುಗಳೂ ಇದ್ದಾರೆ. ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರೀಡಾ ಕೇಂದ್ರ ನೆರವಾಗಿದೆ. ಡಾ. ಟಿ.ಎಚ್. ಪ್ರಕಾಶಪ್ಪ, ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ ವೈದ್ಯಕೀಯ ಅಧೀಕ್ಷಕ
ಕ್ರೀಡಾ ಕೇಂದ್ರ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ವೈದ್ಯಕೀಯ ಉಪಕರಣಗಳ ಅಳವಡಿಕೆ ಕಾರ್ಯವಾಗಬೇಕಿದೆ. ಮುಂದಿನ 3 ತಿಂಗಳಲ್ಲಿ ಕಟ್ಟಡ ಲೋಕಾರ್ಪಣೆ ಕಾರ್ಯ ನೆರವೇರಲಿದೆ. ಡಾ. ಸುಜಾತಾ ರಾಥೋಡ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ