

ಚಿಕ್ಕಮಗಳೂರು: ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗಳು ದೈಹಿಕ ಕ್ಷಮತೆಗೆ ಅತಿ ಮುಖ್ಯ. ಸೋಲು-ಗೆಲುವಿಗಿಂತ ಸ್ಪರ್ಧಾತ್ಮಕ ಮನೋಭಾವ ಅತಿಮುಖ್ಯ ಎಂದು ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್ ಹೇಳಿದರು. ನಗರದ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಚಿಕ್ಕಮಗಳೂರು ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಿಯಾಶೀಲತೆಯ ಸಂಕೇತ:
ಕ್ರೀಡಾಜ್ಯೋತಿ ಸ್ವೀಕರಿಸಿದ ಜಿಪಂ ಸದಸ್ಯೆ ಜಸಂತ ಅನಿಲ್ ಕುಮಾರ್ ಮಾತನಾಡಿ ಮಲ್ಲೇನಹಳ್ಳಿಯಂಥ ಪುಟ್ಟ ಊರುಗಳ ಕಾಲೇಜುಗಳು ಇಂಥಾ ಕ್ರೀಡಾಕೂಟ ನಡೆಸಲು ಮುಂದಾಗುವುದೇ ಕ್ರಿಯಾಶೀಲತೆಯ ಸಂಕೇತ. ಕ್ರೀಡೆಗಳು ಎಲ್ಲರ ಉತ್ಸಾಹ ಹೆಚ್ಚಿಸುವಂಥದ್ದಾಗಿದ್ದು, ಮನಸ್ಸು ಅರಳಿಸುತ್ತವೆ ಎಂದರು. ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಚ್.ರಾಜಪ್ಪ ಮಾತನಾಡಿ, ಇಲಾಖೆಯು ವಿವಿಧ ಉನ್ನತ ತರಗತಿಗಳಿಗೆ ಹೋಗುವವರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಈ ಬಾರಿ ಕ್ರೀಡೆಗಳನ್ನು ನಡೆಸುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕ್ರೀಡೆಗೆ ಅವಕಾಶ ನೀಡಿ:
ಅಧ್ಯಕ್ಷತೆ ವಹಿಸಿದ್ದ ಆತಿಥೇಯ ಸಪಪೂ ಕಾಲೇಜಿನ ಸಿಬಿಸಿ ಅಧ್ಯಕ್ಷ ಕುಲಶೇಖರ್ ಮಾತನಾಡಿ, ಮಲ್ಲೇನಹಳ್ಳಿಯಲ್ಲಿ ವಿಶಾಲವಾದ ಕ್ರೀಡಾಂಗಣ ಇರುವುದರಿಂದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ನಡೆಸಲು ಅವಕಾಶ ನೀಡಬೇಕು ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ, ಪ್ರಾಚಾರ್ಯರ ಸಂಘದ ಅಧ್ಯಕ್ಷೆ ಜಯಶ್ರೀ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಶಾರದಾ ಶಶಿಧರ್, ಮಲ್ಲೇನಹಳ್ಳಿ ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ಉಪಾಧ್ಯಕ್ಷೆ ಪ್ರೇಮಾ, ರೆಸಾರ್ಟ್ ವ್ಯವಸ್ಥಾಪಕ ಸುರೇಶ್, ಮಲ್ಲೇನಹಳ್ಳಿ ಸಪಪೂ ಕಾಲೇಜಿನ ಪ್ರಾಚಾರ್ಯ ಕೆ.ಎಸ್.ಶೇಷಾದ್ರಿ, ಕಳಸಾಪುರ ಕಾಲೇಜು ಪ್ರಾಚಾರ್ಯ ಎಚ್. ಎಂ.ನಾಗರಾಜರಾವ್, ಉಪನ್ಯಾಸಕ ಲೋಹಿತ್, ಉಪನ್ಯಾಸಕರಾದ ಮಂಜುನಾಥ್, ಗಂಗಾಧರ್, ಪ್ರತಾಪ್, ಶಾಬಾದ್, ರಂಗಪ್ಪ, ಸಾಮಾಜಿಕ ಕಾರ್ಯಕರ್ತ ಅನಿಲ್ ಕುಮಾರ್, ತಾಲೂಕಿನ ಇತರ ಕಾಲೇಜುಗಳ ಪ್ರಾಚಾರ್ಯರು ಕಾರ್ಯಕ್ರಮದಲ್ಲಿದ್ದರು.