

ದೊಡ್ಡಬಳ್ಳಾಪುರ: ಕ್ರೀಡೆಗಳು ಕೇವಲ ಮನೋರಂಜನೆಗೆ ಮಾತ್ರವಲ್ಲದೇ ಜೀವನದಲ್ಲಿ ಬದ್ಧತೆ ಮತ್ತು ದೃಢತೆ ಅಳವಡಿಸಿಕೊಳ್ಳುವ ಸುಲಭ ಸಾಧನವಾಗಿದೆ ಎಂದು ಸಂಸದ ಡಾ.ಕೆ ಸುಧಾಕರ್ ತಿಳಿಸಿದರು.
ಶಾಸಕ ಧೀರಜ್ ಮುನಿರಾಜು ಜನ್ಮದಿನದ ಪ್ರಯುಕ್ತ ನಗರದ ಖಾಸ್ ಬಾಗ್ - ದರ್ಗಾಪುರದಲ್ಲಿ ಹಮ್ಮಿಕೊಂಡಿರುವ ಹೊನಲು ಬೆಳಕಿನ ರಾಜ್ಯ ಮಟ್ಟದ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್-2025 ( ಅಂಜನಾದ್ರಿ ಕಪ್ -2025) ಪಂದ್ಯಾವಳಿಯ ಎರಡನೇ ದಿನವಾದ ಮಂಗಳವಾರ ಸಂಜೆ ಭಾಗವಹಿಸಿ ಮಾತನಾಡಿದರು.
ಕ್ರೀಡೆಗಳಿಂದ ನಾವು ಜೀವನದ ಪಾಠ ಕಲಿಯಲು ಸಾಧ್ಯ. ಕ್ರೀಡೆಯಲ್ಲಿ ಗೆಲ್ಲಲು ಅನೇಕ ನಿಯಮಗಳಿವೆ. ಆದರೆ, ಜೀವನದಲ್ಲಿ ಗೆಲ್ಲಬೇಕಾದರೆ ಒಂದೇ ನಿಯಮ. ಸೋಲಲು ಅನೇಕ ದಾರಿಗಳಿವೆ. ಕ್ರೀಡೆಯಲ್ಲಿ ವಿಜಯ ಸಾಧಿಸಲು ಅನೇಕ ನಿಯಮಗಳನ್ನು ಹೇಗೆ ಪಾಲಿಸುತ್ತೇವೆಯೋ ಹಾಗೇ ಸಮಾಜದಲ್ಲಿ ಗೆಲುವು ಸಾಧಿಸಲು ನೈತಿಕ ನಿಯಮಗಳ ಅವಶ್ಯಕತೆಯಿದೆ ಎಂದರು.
ಜಾಗತಿಕ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವಂತಹ ಅವಕಾಶ ಇರುವುದು ಕೇವಲ ಕ್ರೀಡೆಯಲ್ಲಿ ಮಾತ್ರ. ಜಾತಿ, ಮತ, ಬೇಧ, ಪಂಥ, ಧರ್ಮ, ಮೇಲು ಕೀಳೆಂಬ ಭಾವನೆ ತಾಂಡವವಾಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಸಾಮಾನ್ಯನನ್ನು ವಿಶ್ವಮಾನವನನ್ನಾಗಿ ಮಾಡುವುದು ಕ್ರೀಡೆ. ಕ್ರೀಡಾಂಗಣದ ಒಳಗೆ ಕಾಲಿಟ್ಟ ಮರುಘಳಿಗೆ ಎಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ. ಸಮಾಜಕ್ಕೆ ಅಗತ್ಯವಾಗಿ ಬೇಕಾದ ವಿಶ್ವಮಾನವ ದೃಷ್ಟಿಕೋನ ಕ್ರೀಡೆಯಿಂದ ಲಭಿಸುತ್ತದೆ ಎಂದು ಹೇಳಿದರು.
ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ ಇಲ್ಲಿನ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟದ ತಂಡಕ್ಕೆ ರಾಜ್ಯದ ತಂಡವನ್ನು ಆಯ್ಕೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.