

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳ ಜೀವನದಲ್ಲಿ ಪಠ್ಯದಷ್ಟೇ ಪಠ್ಯೇತರ ಹಾಗೂ ಸಾಂಸ್ಕೃತಿ ಚಟುವಟಿಕೆಗಳು ಅತ್ಯವಶ್ಯ. ಕ್ರೀಡೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೊಭಾವನೆ, ಕ್ರಿಯಾಶೀಲತೆ, ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸಹಕಾರಿ ಆಗಿವೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಪಿ.ಸುರೇಶ ಹೇಳಿದರು.
ನಗರದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಹಾಗೂ ವೈ.ಬಿ. ಅಣ್ಣಿಗೇರಿ ವಿಜ್ಞಾನ ವಾಣಿಜ್ಯ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಇಲ್ಲಿನ ಕರ್ನಾಟಕ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯು.ಎನ್. ಹಜಾರೆ ಮಾತನಾಡಿ, ಕ್ರೀಡೆ ಇಲ್ಲದ ಬದುಕು ಕೀಡೆ ತಿಂದ ಹಣ್ಣಿನಂತಾಗುತ್ತದೆ. ರಾಷ್ಟ್ರಮಟ್ಟ ಕ್ರೀಡೆಯಲ್ಲಿ ಭಾಗವಹಿಸುವವರಿಗೆ ಸರ್ಕಾರವು ಸರ್ಕಾರಿ ಹುದ್ದೆಯಲ್ಲಿ ಶೇ. 2ರಷ್ಟು ಮೀಸಲಾತಿ ನೀಡುತ್ತದೆ ಎಂದು ಅವರು ಕ್ರೀಡೆಯ ಮಹತ್ವ ತಿಳಿಸಿದರು.
ವೈ.ಬಿ. ಅಣ್ಣಿಗೇರಿ ಕಾಲೇಜಿನ ಅಧ್ಯಕ್ಷ ಪ್ರೊ. ನಾಗೇಶ ಅಣ್ಣಿಗೇರಿ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ಮತ್ತು ದೈಹಿಕ ಸ್ಥೈರ್ಯ ಹೆಚ್ಚಿಸುತ್ತದೆ. ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆ ಬಹಳ ಅವಶ್ಯಕ ಎಂದರು.
ಪ್ರಾಚಾರ್ಯ ಪ್ರೊ. ಮಹಾಬಳೇಶ್ವರಯ್ಯ, ಉಪ ಪ್ರಾಚಾರ್ಯ ಸಚಿನ್ ಕಮತೆ, ಉಪನ್ಯಾಸಕರು, ವಿದ್ಯಾರ್ಥಿಗಳು, ಇತರರು ಇದ್ದರು. ಪ್ರೊ. ಬಸವರಾಜ ಉಡಕೇರಿ ನಿರೂಪಿಸಿದರು.