

ಹರಪನಹಳ್ಳಿ:ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು ಕ್ರೀಡೆಗಳು ಮುಖ್ಯ ಪಾತ್ರವಹಿಸುತ್ತವೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ನಿಸರ್ಗ ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಂದ ಕಣ್ಣು, ಮೂಳೆ, ರಕ್ತ ಪರಿಚಲನೆ ಕ್ರಿಯೆ ಉತ್ತಮವಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡೆದರೆ ಮೀಸಲಾತಿ ಅನ್ವಯ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಗುಂಡಗತ್ತಿ ಕೆ.ಕೊಟ್ರಪ್ಪ ಮಾತನಾಡಿ, ಕ್ರೀಡೆಯಿಂದ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಅಲ್ಲದೆ ನಿದ್ರಾಹೀನತೆ ಹಾಗೂ ಒತ್ತಡ ಕಡಿಮೆಯಾಗಲಿದ್ದು, ಶಿಸ್ತು ಹಾಗೂ ಸಂಘಟನಾ ಶಕ್ತಿಯನ್ನು ಬೆಳಯುತ್ತದೆ ಎಂದು ತಿಳಿಸಿದರು.
ಶ್ರೀ ಚನ್ನಬಸವ ಶಿವಯೋಗಿಗಳು ಮಾತನಾಡಿದರು. ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ, ಸಿಪಿಐ ನಾಗರಾಜ ಕಮ್ಮಾರ್, ಪ್ರಾಚಾರ್ಯ ಆರ್.ಎಚ್.ಕಲ್ಯಾಣದವರ್, ಸಿ.ಕೋಟ್ರಮ್ಮ ಕೊಟ್ರಪ್ಪ, ಕಾರ್ಯದರ್ಶಿ ವ್ಯವಸ್ಥಾಪಕ ರಾಜು ಎಲಿಗಾರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಷಣ್ಮುಖಪ್ಪ, ಉಪನ್ಯಾಸಕ ಸಾಗರ್.ಪಿ.ಬಿ ಇದ್ದರು.