

ಮುಧೋಳ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯದ ಜೊತೆಗೆ ಕ್ರೀಡೆಗಳು ಪೂರಕವಾಗುತ್ತವೆ. ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಎಲ್ಲ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗಿಯಾಗಬೇಕೆಂದು ಖ್ಯಾತ ಹೃದಯರೋಗ ತಜ್ಞ ಡಾ. ದರ್ಶನ ಬಿರಾದಾರ ಹೇಳಿದರು.
ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಸಿಬಿಎಸ್‌ಇ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀ ಸಂಗಮನಾಥ ಶಾಲಾ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕ ಕ್ರೀಡಾಕೂಟ ಖೇಲೋತ್ಸವ- 2024 ಉದ್ಘಾಟಿಸಿ ಅವರು ಮಾತನಾಡಿದರು.
ಮಗುವಿನ ಆರೋಗ್ಯ ದೃಷ್ಠಿಯಿಂದ ನಿತ್ಯ ದೈಹಿಕ ಶ್ರಮದ ಅವಶ್ಯಕತೆ ಇದ್ದು, ನಮ್ಮ ಅರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢ ಹಂತದಲ್ಲಿ ಸಿಗುವ ಕ್ರೀಡಾ ಸವಲತ್ತುಗಳನ್ನು ಬಳಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಅವಕಾಶ ಪಡೆಯಲು ಸಾಧ್ಯ ಎಂದರು.
ಸಂಸ್ಥೆ ಅಧ್ಯಕ್ಷ ಶಿಶಿರ ಮಲಘಾಣ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಬೇಕು. ಆ ಮೂಲಕ ಶಾಲೆ ಹಾಗೂ ಪೋಷಕರಿಗೆ ಗೌರವ ತರಬೇಕೆಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ಸಂಸ್ಥೆಯ ಶಾಲೆಗಳಿಂದ ಅಂದಾಜು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾಪಟುಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಆಡಳಿತಾಧಿಕಾರಿ ಮಲ್ಲು ಕಳ್ಳೆನವರ, ಮುಖ್ಯಶಿಕ್ಷಕ ವೆಂಕಟೇಶ ಗುಡೆಪ್ಪನವರ, ಪ್ರಾಚಾರ್ಯ ಸುರೇಶ ಭಜಂತ್ರಿ, ನವೀನಕುಮಾರ ಹುಬಳ್ಳಿ, ಖಾಜಾಹುಲಿ ಹುಬಳಿ, ದೈಹಿಕ ಶಿಕ್ಷಕರಾದ ಲಕ್ಷ್ಮಣ ಹವೇಲಿ, ವಿಜಯಲಕ್ಷ್ಮೀ ದುಸರೆ, ಕಾರ್ತಿಕಿ ಶುಂಠೆ, ಮಾನೆ ಇದ್ದರು.