

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳಿಗೆ ಸರ್ವತೋಮುಖ ಅಭಿವೃದ್ಧಿಯನ್ನು ಕೇವಲ ಪಠ್ಯ ಪುಸ್ತಕಗಳು ಮಾಡಲಾರವು. ಅದರೊಟ್ಟಿಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಇದ್ದಾಗ ಮಾತ್ರ ಯಶಸ್ಸಿನ ಜೀವನದತ್ತ ಸಾಗಲು ಸಾಧ್ಯ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಇಲ್ಲಿನ ಮೃತ್ಯುಜಯನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ. ಪುಸ್ತಕದ ಶಿಕ್ಷಣ ದೈಹಿಕ ಶಿಕ್ಷಣಕ್ಕೆ ಸ್ಪೂರ್ತಿ. ದೈಹಿಕ ಶಿಕ್ಷಣ ಬೌದ್ಧಿಕ ವಿಷಯಗಳಿಗೆ ಪೂರಕ ಅಂಶಗಳನ್ನು ನೀಡಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ಪ್ರಗತಿಗೆ ಅನುಕೂಲ ಕಲ್ಪಿಸಲಿದೆ. ಕ್ರೀಡೆ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಆರೋಗ್ಯ ಹೆಚ್ಚಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಪಠ್ಯದ ಮಾಹಿತಿಯನ್ನು ಬೇಗನೆ ಗ್ರಹಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ, ಲೇ-ಜಿಮ್, ಲಾಠಿ ಕುಣಿತಗಳು ನಡೆದವು. ಮಹಾವೀರ ಉಪಾಧ್ಯೆ, ಜಿನೇಂದ್ರ ಕುಂದಗೋಳ, ತ್ರಿವೇಣಿ ಆರ್., ಡಾ. ಬಿ.ಎನ್.ಬಾವಿ, ನಾಗರಾಜ ತೊಗಟೇರ, ಅರುಣ ಸವಣೂರ ಇತರರು ಇದ್ದರು.