ಸೇನೆಗೆ ಸೇರುವ ಮನೋಭಾವ ಬೆಳೆಸಿ

ಕ್ರೀಡಾ ಮತ್ತು ಸಂಸ್ಕೃತಿಕ ಸ್ಪರ್ಧೆ
ಕ್ರೀಡಾ ಮತ್ತು ಸಂಸ್ಕೃತಿಕ ಸ್ಪರ್ಧೆ
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ವಿದ್ಯಾರ್ಥಿಗಳಿಗೆ ಸೇನೆ ಸೇರುವ ಮನೋಭಾವ ಬರಬೇಕು ಎಂದು ಇತ್ತೀಚಿಗೆ ಅಗಲಿದ ಯೋಧ ಪ್ರಾಂಜಲ್ ಅವರ ತಂದೆ ವೆಂಕಟೇಶ್ ಹೇಳಿದರು.
ತಾಲೂಕಿನ ಜಿಗಣಿ ಹಾಗೂ ಬೊಮ್ಮಸಂದ್ರ ಲಿಂಕ್ ರಸ್ತೆಯ ಮಾತೃಧಾಮ ವಿದ್ಯಾರ್ಥಿನಿಲಯದಲ್ಲಿ ಸ್ವಾಮಿ ವಿವೇಕಾನಂದ ರಾಷ್ಟ್ರ ಸೇವಾ ಟ್ರಸ್ಟ್‌ನಿಂದ ಸಂಕ್ರಾಂತಿ ಸಂಭ್ರಮ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ, ಮಾತನಾಡಿದರು.
ಪ್ರಾಂಜಲ್ ಅವರು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ಕೇವಲ ಪಾಠಕ್ಕೆ ಮಾತ್ರ ಸೀಮಿತವಾಗ ಬಾರದು. ಪಾಠದ ಜತೆಗೆ ಆಟ ಹಾಗೂ ದೇಶಭಕ್ತಿ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಪ್ರಾಂಜಲ್ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಆಟದ ಜತೆಗೆ ಕ್ರೀಡೆ ಹಾಗೂ ದೇಶಭಕ್ತಿಯ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಅವರು ನಮ್ಮ ಮಗ ಇರಬಹುದು, ಆದರೆ, ದೇಶಕ್ಕಾಗಿ ಅವರು ನೀಡಿದ ಕೊಡುಗೆ ಅಪಾರ ಎಂದರು.
ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಆಗಬೇಕಾದರೆ, ಒಳ್ಳೆಯ ಆದರ್ಶಗಳು ಅವಶ್ಯಕ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪ್ರೀತಿಯಿಂದ ಒಬ್ಬರಿಗೊಬ್ಬರು ಆಟವಾಡಬೇಕು. ಒಂದೇ ನಾಣ್ಯಕ್ಕೆ ಎರಡು ಮುಖಗಳಿದ್ದಂತೆ ನಾವೆಲ್ಲರೂ ಪ್ರೀತಿಯಿಂದ ಎಲ್ಲರನ್ನೂ ಗೆಲ್ಲಿಸುವ ಕೆಲಸ ಆಗಬೇಕು ಎಂದರು.
ಮಾತೃಧಾಮ ವಿದ್ಯಾರ್ಥಿನಿಲಯದ ಅಧ್ಯಕ್ಷೆ ಗಾಯತ್ರಿ ಗೋಪಿನಾಥ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಒಳ್ಳೆಯ ಮನೋಭಾವ ಹಾಗೂ ಅವರಿಗೆ ದೇಶದ ಬಗ್ಗೆ ಗೌರವ ಹೆಚ್ಚಾಗಬೇಕು. ಕ್ರೀಡೆಗಳಲ್ಲಿ ಕೇವಲ ಆಸಕ್ತಿ ಇದ್ದರೆ ಸಾಲದು, ನಾವು ಏನಾದರೂ ಸಾಧನೆ ಮಾಡುತ್ತೇವೆ ಎನ್ನುವ ಛಲ ಕೂಡ ಇರಬೇಕು. ಈ ನಿಟ್ಟಿನಲ್ಲಿ ಪ್ರತಿವರ್ಷ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಆಸಕ್ತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾತೃಧಾಮ ಸಂಸ್ಥೆಯ ಉಪಾದ್ಯಕ್ಷ ರಾಜ್ ಗೋಪಾಲ್, ಕಾರ್ಯದರ್ಶಿ ಗಿರೀಶ್, ಖಜಾಂಚಿ ಲಕ್ಷ್ಮಿಕಾಂತ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ್, ನೇತ್ರಾವತಿ, ಬಿಂದು ಭಾನು, ಲಾವಣ್ಯ, ಮಾಲಾ, ಕ್ರಷ್ಣಮೂರ್ತ್ಯಿ, ಶಿವಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net