

ಮಂಡ್ಯ: ಒಂದೇ ಪ್ರಯತ್ನಕ್ಕೆ ಯಾವುದೂ ಸಿಗುವುದಿಲ್ಲ ಮತ್ತು ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಒಂದು ಬಾಗಿಲು ಮುಚ್ಚಿದರೇನು, ಸಾವಿರಾರು ಬಾಗಿಲುಗಳು ಇರುತ್ತವೆ. ಮುಕ್ತವಾಗಿ ಯೋಚಿಸಿ ಮುಂದೆ ನಡೆದರೆ ಗುರಿ ಮುಟ್ಟಬಹುದು. ಆದ್ದರಿಂದ ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸಲಹೆ ನೀಡಿದರು.
ನಗರದ ಹೊರವಲಯದ ಜ್ಞಾನಸಾಗರ ಕ್ಯಾಂಪಸ್‌ನಲ್ಲಿ ಎಸ್.ಬಿ.ಇ.ಟಿ. ಸಂಸ್ಥೆಯ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಳ್ಳದಿದ್ದರೆ ಮತ್ತು ಶ್ರಮ ಹಾಕದಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಅಲ್ಲದೆ, ನಿಮ್ಮ ಮುಂದಿನ ಜೀವನ ಕಷ್ಟಕರವಾಗಲಿದೆ ಎಂದರು.
ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಶ್ರದ್ಧೆ ಮತ್ತು ನಿಷ್ಠೆಯಿಂದ ನಮ್ಮ ಕರ್ತವ್ಯವನ್ನು ಮಾಡಬೇಕು. ಆಗಮಾತ್ರ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ. ವಿದ್ಯಾರ್ಥಿನಿಯರು ದಿಟ್ಟ ಮಹಿಳೆಯಾಗಿ ದೃಢವಾಗಿ ಹೇಗೆ ನಿಂತುಕೊಳ್ಳಬೇಕೆಂದು ಯೋಚಿಸಿದರೆ ಒಬ್ಬ ಸದೃಢ ಮಹಿಳೆಯಾಗಿ ಬೆಳೆಯಬಹುದು. ಮುಟ್ಟಿನ ಬಗ್ಗೆ ಕೀಳರಿಮೆ ಬೇಡ. ಈ ಹಿನ್ನೆಲೆಯಲ್ಲಿ ‘ಮುಟ್ಟಿನ ಕಪ್’ ನೀಡುವ ಮೂಲಕ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಇದೇ ನಿಮ್ಮ ಗುರುಗಳಿಗೆ ಕೊಡುವ ದೊಡ್ಡ ಗೌರವವಾಗಿದೆ. ಮಕ್ಕಳು ಸಾಧನೆ ಮಾಡಿದರೆ ಪೋಷಕರಿಗಿಂತ ಶಿಕ್ಷಕರು ಹೆಚ್ಚು ಸಂತೋಷಪಡುತ್ತಾರೆ. ನೀವೆಲ್ಲರೂ ಹದಿಹರೆಯದ ವಯಸ್ಸಿನವರಾಗಿದ್ದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಬೇಕೆಂದು ಕರೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಈ ಮಟ್ಟಕ್ಕೆ ಬೆಳೆಸಲು ಬಹಳ ಶ್ರಮ ಬೇಕು. ನಾನು ಕಂಡಂತೆ ಮಂಡ್ಯ ಜಿಲ್ಲೆ ಶೈಕ್ಷಣಿಕವಾಗಿ ಬಹಳ ಹಿಂದುಳಿದಿತ್ತು. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ದೂರದ ಬೆಂಗಳೂರು, ಮಂಗಳೂರು, ಮೂಡಬಿದರೆ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುತ್ತಿದ್ದರು. ಇದನ್ನರಿತು ಪ್ರೊ.ಬಿ.ಶಿವಲಿಂಗಯ್ಯ ಮತ್ತು ಡಾ.ಮೀರಾ ಶಿವಲಿಂಗಯ್ಯ ಅವರು ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಸ್ಥಾಪಿಸಿ ಉತ್ತಮ ಉಪನ್ಯಾಸಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಎಲ್ಲ ಮಕ್ಕಳು ಬುದ್ಧಿವಂತರೇ. ಆದರೆ, ನಿಮ್ಮ ಪ್ರತಿಭೆಯನ್ನು ಹೊರಹಾಕಿದರೆ ಮುಂದಿನ ಜೀವನಕ್ಕೆ ಮಾರ್ಗ ಆಗುತ್ತದೆ. ಹಿರಿಯ ವಿದ್ಯಾರ್ಥಿಗಳ ಒಳ್ಳೆಯ ಗುಣಗಳನ್ನು ಕಿರಿಯ ವಿದ್ಯಾರ್ಥಿಗಳು ಅನುಕರಣೆ ಮಾಡಿದರೆ ನಿಮ್ಮ ಜೀವನ ಉತ್ತಮವಾಗುವುದಲ್ಲದೆ, ಸಂಸ್ಥೆಗೆ ಉತ್ತಮ ಹೆಸರು ತಂದುಕೊಡಬಹುದು ಎಂದರು.
ಎಸ್‌ಬಿಇಟಿ ಅಧ್ಯಕ್ಷ ಡಾ. ಬಿ.ಶಿವಲಿಂಗಯ್ಯ ಮಾತನಾಡಿ, ಪ್ರೌಢಶಾಲೆಯ ನಂತರ ಪಿಯುಸಿ ಶಿಕ್ಷಣಕ್ಕಾಗಿ ಪಾಲಕರು ತಮ್ಮ ಮಕ್ಕಳನ್ನು ದೂರದ ನಗರ ಪ್ರದೇಶಗಳಿಗೆ ಸೇರಿಸುತ್ತಿದ್ದರು. ಇದನ್ನರಿತು ಗ್ರಾಮೀಣ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡಬೇಕೆಂದು ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜನ್ನು ತೆರೆಯಲಾಯಿತು ಎಂದು ಹೇಳಿದರು.
ಎಸ್‌ಬಿಇಟಿ ಸಂಸ್ಥೆಯ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಶೈಕ್ಷಣಿಕ ಪಾಲುದಾರರಾದ ಕೆ.ಚೇತನ್ ಕೃಷ್ಣ, ಎಂ.ಆರ್.ಮಂಜುನಾಥ್, ಪ್ರಾಂಶುಪಾಲ ಶ್ರೀನಿವಾಸ್, ಉಪನ್ಯಾಸಕ ಮುಜಾವುದ್ದೀನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೇ 8ನೇ ಸ್ಥಾನ ಪಡೆದ ಎಸ್.ಡಿ.ಹಿಮಾನಿ, 9ನೇ ಸ್ಥಾನ ಪಡೆದ ಜೆ.ದೀಕ್ಷಾ, 10ನೇ ಸ್ಥಾನ ಪಡೆದ ಎಂ.ಪಿ.ಪ್ರೀತಮ್ ಹಾಗೂ ಆರ್ಕಿಟೆಕ್ಚರ್ ಆಫ್ ಸಿಇಟಿಯಲ್ಲಿ 29ನೇ ರ‌್ಯಾಂಕ್ ಪಡೆದ ಡಿ.ಸಿ.ದೀಪ್ತಿ ಅವರನ್ನು ಸನ್ಮಾನಿಸಲಾಯಿತು.